ತಾಯಿಯನ್ನು ಉಸಿರುಗಟ್ಟಿಸಿ ಕೊಂದ ಪುತ್ರನಿಗೆ 5 ವರ್ಷಗಳ ಬಳಿಕ ಜೀವಾವಧಿ ಶಿಕ್ಷೆ
ಬೆಂಗಳೂರು: ಪುತ್ರನೊಬ್ಬ ತಾಯಿಯ ಉಸಿರುಗಟ್ಟಿಸಿ ಕೊಂದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಪುತ್ರನಿಗೆ 5 ವರ್ಷಗಳ ನಂತರ ಜೀವಾವಧಿ ಶಿಕ್ಷೆ ವಿಧಿಸಿದೆ.
2018 ರ ಜೂನ್ 13 ರಂದು ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಇದೀಗ ಬರೋಬ್ಬರಿ 5 ವರ್ಷಗಳ ಬಳಿಕ ಆರೋಪಿ ಶರತ್ ಕುಮಾರ್ ಗೆ ನ್ಯಾಯಾಧೀಶೆ ಎಂ.ಎಸ್, ಕಲ್ಪನಾ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಆರೋಪಿಗೆ ಐಪಿಸಿ ಸೆಕ್ಷನ್ 302 ರ ಪ್ರಕಾರ ಜೀವಾವಧಿ ಶಿಕ್ಷೆ, ಹಾಗೂ ಸಾಕ್ಷಿ ನಾಶಪಡಿಸಲು ಯತ್ನಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್ 201 ರ ಪ್ರಕಾರ 3 ವರ್ಷ ಶಿಕ್ಷೆ ವಿಧಿಸಲಾಗಿದೆ.
ಘಟನೆಯ ಹಿನ್ನೆಲೆ
ಆರೋಪಿ ಶರತ್ ಕುಮಾರ್ ಮನೆ ಮಾರಾಟ ಮಾಡುವ ವಿಷಯಕ್ಕೆ ಸಂಬಂಧಪಟ್ಟಂತೆ ಆತನ ತಾಯಿ ಕಾತ್ಯಾಯಿನಿ ಜೊತೆಗೆ ಜಗಳವಾಡಿದ್ದ. ಬಳಿಕ ಕೋಪದಿಂದ ಆತ ತಾಯಿಯ ಮೂಗು, ಬಾಯಿಯನ್ನು ಬಲವಾಗಿ ಮುಚ್ಚಿ ಉಸಿರುಗತ್ಟಿಸಿ ಕೊಂದಿದ್ದಾನೆ. ಇಷ್ಟೇ ಅಲ್ಲದೇ ಘಟನೆಯ ಬಳಿಕ ಸಾಕ್ಷ್ಯಾಧಾರಗಳನ್ನು ನಾಶಗೊಳಿಸಲು ಯತ್ನಿಸಿದ್ದ ಎನ್ನಲಾಗಿದೆ.