ತುರ್ತು ಕಾಮಗಾರಿಗಳ ನಿರ್ಬಂಧಕ್ಕೆ ವಿನಾಯಿ ನೀಡಲು ಸರ್ಕಾರಕ್ಕೆ ಶಾಸಕ ಕಾಮತ್ ಆಗ್ರಹ
ಮಂಗಳೂರು : ತುರ್ತು ಕಾಮಗಾರಿಗಳ ನಿರ್ಬಂಧಕ್ಕೆ ವಿನಾಯಿ ನೀಡಬೇಕೆಂದು ಶಾಸಕ ವೇದವ್ಯಾಸ್ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನೇಕ ಕಾಮಗಾರಿಗಳನ್ನು ಸರ್ಕಾರ ತಡೆ ಹಿಡಿದಿದ್ದು ಇವೆಲ್ಲ ಅತ್ಯಂತ ತುರ್ತಾಗಿ ಆಗಬೇಕಿರುವ ಕಾಮಗಾರಿಗಳಾಗಿದ್ದು ವಿಶೇಷ ಆದ್ಯತೆಯಾಗಿ ಪರಿಗಣಿಸಿ ತಡೆಗೆ ವಿನಾಯಿತಿ ನೀಡಿ ಕಾಮಗಾರಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಮಾನ್ಯ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿಯವರಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಆಗ್ರಹಿಸಿದರು.
ನಗರದ 57ನೇ ಹೊಯ್ಗೆ ಬಜಾರ್ ವಾರ್ಡ್, ಬಜಾಲ್, ಮಿಲಾಗ್ರೀಸ್, ಮಣ್ಣಗುಡ್ಡ, ಬೋಳೂರು, ಬಿಜೈ, ಮರೋಳಿ ಮತ್ತು ಅತ್ತಾವರ ವಾರ್ಡಿನ ರಸ್ತೆಗಳು ಅನೇಕ ಮನೆಗಳಿಗೆ ಸಂಪರ್ಕವನ್ನು ನೀಡುವ ರಸ್ತೆಗಳಾಗಿದ್ದು ಇಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ, ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗಿರುತ್ತದೆ.
ಕೆಲವು ಕಡೆ ಕಾಲುಸಂಕ ನಿರ್ಮಾಣ ಇನ್ನು ಕೆಲವು ಕಡೆ ಮನೆಗಳಿಗೆ ರಕ್ಷಣಾತ್ಮಕವಾಗಿ ತಡೆಗೋಡೆ ನಿರ್ಮಾಣದ ಅವಶ್ಯಕತೆ ಇರುವುದರಿಂದ ಈ ಎಲ್ಲಾ ಪ್ರದೇಶಗಳಿಗೆ ಕಾಂಕ್ರೀಟ್ ಚರಂಡಿ, ತಡೆಗೋಡೆ, ಕಾಲುಸಂಕ, ಕಾಂಕ್ರೀಟ್ ರಸ್ತೆ ನಿರ್ಮಿಸಲು ಈ ಹಿಂದೆ ಕಾಮಗಾರಿ ಪ್ರಕ್ರಿಯೆಗಳನ್ನು ಆರಂಭಿಸಲಾಗಿತ್ತು.
ಆದರೆ ಪ್ರಸ್ತುತ ಸರಕಾರ ಆದೇಶದಂತೆ ಎಲ್ಲಾ ಕಾಮಗಾರಿಗಳಿಗೆ ನಿರ್ಬಂಧವಿದ್ದು, ಸದರಿ ಕಾಮಗಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಅತಿ ಅವಶ್ಯಕವಾಗಿರುವುದರಿಂದ ಸರ್ಕಾರದ ನಿರ್ಬಂಧಕ್ಕೆ ವಿನಾಯಿತಿ ನೀಡಿ ಆದ್ಯತೆಯ ಮೇರೆಗೆ ಸದರಿ ಕಾಮಗಾರಿಗಳನ್ನು ನಿರ್ವಹಿಸಲು ಇಲಾಖಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಬೇಕಾಗಿ ಸಚಿವರಲ್ಲಿ ಆಗ್ರಹಿಸಿದರು.