Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದುಬೈನಿಂದ ಪಾಸ್​ಪೋರ್ಟ್​ ವಿಳಾಸ ಬದಲಿಗೆ ಅರ್ಜಿ ಹಾಕಿದ ಮೋಸ್ಟ್ ವಾಂಟೆಡ್‌ ಮೈನಿಂಗ್‌ ಡಾನ್…!

ಸಹರಾನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮಾಜಿ ಎಂಎಲ್​ಸಿ, ಮೈನಿಂಗ್​ ಮಾಫಿಯಾ ಡಾನ್ ಹಾಜಿ ಇಕ್ಬಾಲ್‌ ದುಬೈನಲ್ಲಿ ಕುಳಿತು ತನ್ನ ಪಾಸ್​ಪೋರ್ಟ್​ನಲ್ಲಿ ವಿಳಾಸ ಬದಲಾವಣೆ ಮಾಡಲು ಕೋರಿ ಗಾಜಿಯಾಬಾದ್​ ಪಾಸ್​ಪೋರ್ಟ್ ಕಚೇರಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಇದರಿಂದ ಒಂದು ವರ್ಷದಿಂದ ತಲೆಮರೆಸಿಕೊಂಡಿರುವ ಇಕ್ಬಾಲ್​ ವಿದೇಶದಲ್ಲಿ ಇರುವುದು ಖಚಿತವಾಗಿದೆ. ಈತನ​ ವಿರುದ್ಧ ಲುಕ್​ಔಟ್​ ನೊಟೀಸ್​ ಕೂಡ ಹೊರಡಿಸಲಾಗಿದೆ.

ಮೋಸ್ಟ್ ವಾಂಟೆಡ್ ಆಗಿರುವ ಹಾಜಿ ಇಕ್ಬಾಲ್ ಮಿರ್ಜಾಪುರದ ನಿವಾಸಿಯಾಗಿದ್ದು, ಮೈನಿಂಗ್ ದಂಧೆ ಪ್ರಕರಣದಲ್ಲಿ ಬಂಧಿಸಲು ಉತ್ತರ ಪ್ರದೇಶದ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಅಲ್ಲದೇ, ಈತನ ಬಂಧನಕ್ಕೆ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಈ ಹಿಂದೆ ಹಲವೆಡೆ ಪೊಲೀಸರು ದಾಳಿ ನಡೆಸಿದ್ದರೂ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ ಕಳೆದ ಮೂರು ದಿನಗಳ ಹಿಂದಷ್ಟೇ ದುಬೈನ ಉದ್ಯಮಿಯೊಂದಿಗೆ ಹಾಜಿ ಇಕ್ಬಾಲ್ ಕಾಣಿಸಿಕೊಂಡಿರುವ​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹಾಜಿ ಇಕ್ಬಾಲ್‌ ಫೋಟೋ

ಇದರ ಮರುದಿನವೇ ಇಕ್ಬಾಲ್ ತನ್ನ ಪಾಸ್‌ಪೋರ್ಟ್​ ವಿಳಾಸವನ್ನು ಬದಲಾಯಿಸಲು ಗಾಜಿಯಾಬಾದ್ ಕಚೇರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವುದು ಬಯಲಾಗಿದೆ. ಇದರಲ್ಲಿ ತನ್ನ ಹೊಸ ವಿಳಾಸವನ್ನು ಮಿರ್ಜಾಪುರದ ಬದಲಿಗೆ ಗುರುಗ್ರಾಮ್​ ಎಂದು ಬದಲಾಯಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಷಯ ಗೊತ್ತಾದ ಕೂಡಲೇ ಪೊಲೀಸರು ಅಲರ್ಟ್​ ಆಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಕ್ಬಾಲ್ ದುಬೈನಿಂದಲೇ ಅರ್ಜಿ ಸಲ್ಲಿಸಿರುವುದು ಬಹಿರಂಗವಾಗಿದೆ. ಆದ್ದರಿಂದ ಸ್ಥಳೀಯ ಪೊಲೀಸರು ರಾಯಭಾರಿ ಕಚೇರಿಯ ಪ್ರಕ್ರಿಯೆ ಪೂರ್ಣಗೊಳಿಸುವುದರೊಂದಿಗೆ ದುಬೈನಲ್ಲಿ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಡಾ.ದಿನೇಶ್​ ಚಂದ್ರ ಪ್ರತಿಕ್ರಿಯಿಸಿ, “ಹಾಜಿ ಇಕ್ಬಾಲ್ ಪತ್ತೆಗೆ ಒಂದು ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದ ನಂತರದ ದಿನಗಳಿಂದ ದುಬೈನಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿ ಬಂದಿದೆ” ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಕೆಲವು ದಿನಗಳ ಹಾಜಿ ಇಕ್ಬಾಲ್ ಪುತ್ರ ಜಾವೇದ್​ಗೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್​ನಿಂದ ರಿಲೀಫ್ ಸಿಕ್ಕಿದೆ. ದರೋಡೆಕೋರ ಕಾಯ್ದೆಯಡಿಯಲ್ಲಿ ವಶಪಡಿಸಿಕೊಂಡ ಹಲವಾರು ಆಸ್ತಿಗಳ ಪ್ರಾತಿನಿಧ್ಯಗಳನ್ನು ಕಾಯ್ದೆಯ ನಿಬಂಧನೆಗಳ ಪ್ರಕಾರ ವಿಲೇವಾರಿ ಮಾಡಲು ಕೋರ್ಟ್ ಸ್ಥಳೀಯ ಆಡಳಿತಕ್ಕೆ ಆದೇಶಿಸಿದೆ.

ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಯಾವುದೇ ನೊಟೀಸ್ ನೀಡದೆ ಜಾವೇದ್​ಗೆ ಸೇರಿದ ಆಸ್ತಿಯನ್ನು ಸೀಲ್ ಮಾಡಿದೆ. ಆ ಆಸ್ತಿಯನ್ನು ಸರ್ಕಾರಿ ಆಸ್ತಿಗೆ ಲಗತ್ತಿಸಿದೆ. ಇದಲ್ಲದೇ, ಅವರು ಪೊಲೀಸ್ ವಶದಲ್ಲಿದ್ದರೂ ಕೆಲವು ಆಸ್ತಿಗಳನ್ನು ಹರಾಜು ಮಾಡಿದ್ದಾರೆ. ಇದು ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಹಾಜಿ ಇಕ್ಬಾಲ್ ಪುತ್ರನ ಪರ ವಕೀಲ ಇಂದ್ರಭಾನ್ ಯಾದವ್ ತಿಳಿಸಿದ್ದಾರೆ.

ಇದರ ವಿಚಾರಣೆ ನಡೆಸಿದ ಕೋರ್ಟ್​, ಸಂಬಂಧಿಸಿದ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಂಡ ಆಸ್ತಿ ಹರಾಜು ಹಾಕುವ ಹಕ್ಕು ಆಡಳಿತಕ್ಕೆ ಇಲ್ಲ ಎಂದು ಹೇಳಿರುವುದಾಗಿ ವಕೀಲ ಯಾದವ್ ಮಾಹಿತಿ ನೀಡಿದ್ದಾರೆ. ಈ ಹಿಂದೆ ಹಾಜಿ ಇಕ್ಬಾಲ್ ವಿರುದ್ಧ ದಾಖಲಾಗಿದ್ದ ಏಳು ಪ್ರಕರಣಗಳನ್ನು ಮುಕ್ತಾಯಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು.