Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೇಶದಲ್ಲಿ ಏಕಾಏಕಿ ಗಗನಕ್ಕೇರಿತು ಅಕ್ಕಿಯ ಬೆಲೆ – ಗರಿಷ್ಠ ಮಟ್ಟ ತಲುಪಿದ ಅಕ್ಕಿ ದರ ಶೇ.9.8ರಷ್ಟು ಹೆಚ್ಚಳ

ರಾಜ್ಯ, ದೇಶ ಮಾತ್ರವಲ್ಲದೇ, ವಿಶ್ವದ ಪ್ರಮುಖ ದೇಶಗಳಲ್ಲಿಯೂ ಅಕ್ಕಿಯ ದರ ಭಾರಿ ಏರಿಕೆ ಕಂಡಿದೆ. ಆಗಸ್ಟ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಶೇಕಡ 9.8ರಷ್ಟು ಏರಿಕೆ ಕಂಡಿದೆ ಎಂದು ಆಹಾರ ಮತ್ತು ಕೃಷಿ ಸಂಸ್ಥೆ -FAO ಸರಾಸರಿ ಆಹಾರದರ ಸೂಚ್ಯಂಕ ತಿಳಿಸಿದೆ.

ಈ ದರ ಕಳೆದ 15 ವರ್ಷಗಳಲ್ಲೇ ಗರಿಷ್ಠವಾಗಿದೆ. ಕೊರೋನಾ ನಂತರ ಜಾಗತಿಕವಾಗಿ ಅಕ್ಕಿ ಬಳಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಅಕ್ಕಿಗೆ ಬೇಡಿಕೆ ಹೆಚ್ಚಿದ್ದು, ಭಾರತದಿಂದ ಅಕ್ಕಿ ರಫ್ತು ಮೇಲೆ ನಿರ್ಬಂಧ ಹೇರಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಪೂರೈಕೆಯಲ್ಲಿ ವ್ಯತ್ಯವಾಗಿರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ದೇಶದಲ್ಲಿಯೇ ಮಳೆ ಕೊರತೆ ಕಂಡುಬಂದಿದ್ದು, ಸದ್ಯದ ಪರಿಸ್ಥಿತಿ ಗಮನಿಸಿದಾಗ ಈ ಬಾರಿ ರಾಜ್ಯದಲ್ಲಿ ಶೇಕಡ 50ರಷ್ಟು ಭತ್ತ ಬೆಳೆ ಕಡಿಮೆಯಾಗಬಹುದು. ಹೆಚ್ಚಿನ ಮಳೆಯಲಿ ಶೇಕಡ 25 ರಿಂದ 30 ರಷ್ಟು ಹೆಚ್ಚುವರಿ ಬೆಳೆಯಾಗಬಹುದು. ಇಲ್ಲದಿದ್ದರೆ ಮುಂದಿನ ವರ್ಷ ಅಕ್ಕಿ ಕೊರತೆ ಎದುರಾಗಲಿದ್ದು, ಬೇಸಿಗೆ ಬೆಳೆ ಬಂದ ನಂತರ ಸ್ವಲ್ಪಮಟ್ಟಿಗೆ ಕೊರತೆ ಸರಿದೂಗಿಸಬಹುದಾಗಿದೆ.

ಎರಡು ತಿಂಗಳ ಹಿಂದೆ ಇದ್ದ ಅಕ್ಕಿದರ ಈಗ 10 ರಿಂದ 20 ರೂ.ವರೆಗೆ ದುಬಾರಿಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ದರಕ್ಕೆ ಶೇಕಡ 10ರಷ್ಟು ಸೇರಿಸಿ ಮಾರಾಟ ಮಾಡಲಾಗುತ್ತದೆ.

ದೋಸೆ, ಇಡ್ಲಿ ಅಕ್ಕಿ ದರ 32 ರೂ. ನಿಂದ 40 ರೂ., ಸ್ಟೀಮ್ ಅಕ್ಕಿ ದರ 40 ರಿಂದ 50 ರೂ., ರಾ ರೈಸ್ ದರ 47 ರೂ. ನಿಂದ 54 ರೂ., ಕೊಲ್ಲಂ ರೈಸ್ ದರ 60 ರಿಂದ 62 ರೂ.ಗೆ ಏರಿಕೆಯಾಗಿದ್ದು, ಕುಚಲಕ್ಕಿ ದರ ಕೂಡ ಏರಿಕೆ ಕಂಡಿದೆ.