ನಟಿ ಜಾಕ್ಲೀನ್ ಫೆರ್ನಾಂಡಿಸ್ ಗೆ ಜೈಲಿನಿಂದಲೇ ಧಮಕಿ ಹಾಕಿದ ವಂಚಕ ಸುಕೇಶ್ !
ಮುಂಬೈ: ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ಲೀನ್ ಫೆರ್ನಾಂಡಿಸ್ ಇತ್ತೀಚಿನ ವರ್ಷಗಳಲ್ಲಿ ಅವರು ನಟನೆ, ಸಿನಿಮಾಗಿಂತ ಹೆಚ್ಚು ಸದ್ದು ಮಾಡುತ್ತಿರುವುದು ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ. ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆ, ಹಣಸಹಾಯ ಪಡೆದಿದ್ದಾರೆ ಎಂಬ ಆರೋಪ ಜಾಕಿ ಮೇಲಿದೆ.
200 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಕೇಶ್ ಸದ್ಯ ತಿಹಾರ್ ಜೈಲಿನಲ್ಲಿದ್ದು, ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಸುಕೇಶ್ನಿಂದ ಹಣ ಪಡೆದಿರುವ ಕಾರಣ ಜಾಕ್ಲೀನ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಆ ತಲೆಬಿಸಿಯ ನಡುವೆ ಸುಕೇಶ್ ಜೈಲಿನಿಂದಲೇ ಜಾಕ್ಲೀನ್ಗೆ ಪ್ರೇಮಪತ್ರಗಳನ್ನು ಬರೆಯುತ್ತಿದ್ದು, ಅದು ಮತ್ತಷ್ಟು ತಲೆನೋವು ತಂದೊಡ್ಡಿದೆ. ಹೀಗಾಗಿಯೇ ಜಾಕ್ಲೀನ್ ಸುಕೇಶ್ ಅವರಿಂದ ಪತ್ರಗಳನ್ನು ಕಳುಹಿಸಬೇಡಿ ಎಂದು ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರಂತೆ.
ಇದರಿಂದ ಸಿಟ್ಟಿಗೆದ್ದಿರುವ ಸುಕೇಶ್ ಪತ್ರಮುಖೇನ ಜಾಕ್ಲೀನ್ಗೆ ಬೆದರಿಕೆ ಹಾಕಿದ್ದಾನಂತೆ. ‘ನೀವು ಯಾರನ್ನು ರಕ್ಷಣೆ ಮಾಡುತ್ತಿದ್ದೀರೋ, ಅವರೇ ನಿಮ್ಮ ಬೆನ್ನ ಹಿಂದೆ ಚಾಕು ಹಾಕುತ್ತಾರೆಂದರೆ ಹೇಗೆ? ನಾನು ಹೀಗಾಗುತ್ತೆ ಅಂತ ಕನಸಿನಲ್ಲೂ ಊಹಿಸಿರಲಿಲ್ಲ. ಅವರೇ ಬಲಿಪಶುವಿನಂತೆ ಬಿಂಬಿಸಿಕೊಂಡು ನನ್ನನ್ನು ಕೆಟ್ಟವನನ್ನಾಗಿ ಮಾಡುತ್ತಿದ್ದಾರೆ.
ಇದರಿಂದ ನನಗೆ ಅತೀವ ನೋವಾಗಿದೆ. ಹಾಗಂತ ನಾನು ಸುಮ್ಮನೆ ಕೂರುವುದಿಲ್ಲ. ನಾನು ಅವರಿಗಾಗಿ ಹಣಸಂದಾಯ ಮಾಡಿರುವ ಮಾಹಿತಿಯನ್ನು ಬಹಿರಂಗಗೊಳಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದ್ದಾನೆ. ಸದ್ಯ ಜಾಕ್ಲೀನ್ ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.