ನದಿಗೆ ಕಾರು ಉರುಳಿ ಬಿದ್ದು ಒಂದೇ ಕುಟುಂಬದ ಐವರು ಸಾವು.!
ನಾಂದೇಡ್: ವೇಗವಾಗಿದ್ದ ಸ್ಕಾರ್ಪಿಯೊ ಎಸ್ಯುವಿ ಕಾರು ನದಿಗೆ ಉರುಳಿ ಬಿದ್ದು ತೆಲಂಗಾಣದ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದುರ್ಘಟನೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮೊಘಲಿ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.
ಇನ್ನು ಈ ದುರ್ಘಟನೆಯಲ್ಲಿ ಆರು ಜನರಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭೋಕರ್ನ ಕುಟುಂಬವೊಂದು ಸಂಬಂಧಿ ಸಂತೋಷ್ ಭಲೇರಾವ್ ಎಂಬುವರ ಮಗಳ ಮೊದಲ ಹುಟ್ಟುಹಬ್ಬವನ್ನು ಆಚರಿಸಿ ಪಕ್ಕದ ರಾಜ್ಯದ ನಿಜಾಮಾಬಾದ್ನ ವನ್ನೆಲ್ಗೆ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ನಾಂದೇಡ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರನ್ನು ಸವಿತಾ ಶ್ಯಾಮ್ ಭಲೇರಾವ್ (25), ರೇಖಾ ಪರಮೇಶ್ವರ ಭಲೇರಾವ್ (30), ಅಂಜನಾ ಜ್ಞಾನೇಶ್ವರ್ ಭಲೇರಾವ್ (31), ಇಬ್ಬರು ಅಪ್ರಾಪ್ತರಾದ ಪ್ರೀತಿ ಪರಮೇಶ್ವರ ಭಲೇರಾವ್ (8) ಮತ್ತು ಸುಶೀಲ್ ಮರೋಟಿ ಗಾಯಕ್ವಾಡ್ (7) ಎಂದು ಗುರುತಿಸಲಾಗಿದೆ.