ನನ್ನ ಮಗನನ್ನು ನಾನು ಕೊಂದಿಲ್ಲ ಎಂದ ಸುಚನಾ ಸೇಠ್ – ಕೊಠಡಿಯಲ್ಲಿ ಸಿಕ್ಕ ಕೆಮ್ಮಿನ ಸಿರಫ್ ಖಾಲಿ ಬಾಟಲ್ ಗಳ ಕಥೆ ಏನು…?
ಪಣಜಿ : ತಮ್ಮ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಕಾರಿನಲ್ಲಿ ಕೊಂಡೊಯ್ಯುವಾಗ ಸಿಕ್ಕಿಬಿದ್ದಿದ್ದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿಯೊಂದರ ಸಿಇಎ ಸುಚನಾ ಸೇಠ್ ಇದೀಗ ನಾನು ನನ್ನ ಮಗನನ್ನು ಕೊಲೆ ಮಾಡಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾಳೆ ಎಂದು ವರದಿಯಾಗಿದೆ.
ಗೋವಾದ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಮಗನನ್ನು ಕೊಂದು, ಚಿತ್ರದುರ್ಗದಲ್ಲಿ ಸಿಕ್ಕಿಬಿದ್ದ ಬೆಂಗಳೂರಿನ ಕಂಪೆನಿಯ ಸಿಇಒ ಸುಚನಾ ಸೇಥ್ ಕೃತ್ಯದ ಬಗ್ಗೆ ಮತ್ತಷ್ಟು ಕುತೂಹಲಕಾರಿ ಸಂಗತಿಗಳು ಹೊರಬಂದಿವೆ. ಕೃತಕ ಬುದ್ದಿಮತ್ತೆ ಕಂಪೆನಿ ನಡೆಸುತ್ತಿರುವ ಸುಚ ನಾಲ್ಕು ವರ್ಷದ ಮಗನ ಹತ್ಯೆಯನ್ನು ಸಾಕಷ್ಟು ತಯಾರಿ ನಡೆಸಿ ಎಸಗಿದ್ದಾರೆ ಎಂಬ ಅನುಮಾನ ಮೂಡಿದೆ. ಮಗನೊಂದಿಗೆ ಸುಚನಾ ಉಳಿದುಕೊಂಡಿದ್ದ ಹೋಟೆಲ್ ಕೊಠಡಿಯನ್ನು ತಪಾಸಣೆ ನಡೆಸಿದ ಗೋವಾ ಪೊಲೀಸರಿಗೆ ಕೆಮ್ಮಿನ ಸಿರಪ್‌ನ ಖಾಲಿ ಬಾಟಲಿಗಳು ದೊರಕಿವೆ. ಕೊಲೆಗೂ ಮುನ್ನ ಮಗನಿಗೆ ಹೆವಿ ಡೋಸ್ ಸಿರಪ್ ಕುಡಿಸಿರುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಗೋವಾದ ಕ್ಯಾಂಡೋಲಿಮ್ ಅಪಾರ್ಟ್‌ಮೆಂಟ್‌ನಲ್ಲಿ ಮಗನನ್ನು ಕೊಂದಿದ್ದ ಪಶ್ಚಿಮ ಬಂಗಾಳ ಮೂಲದ ಸುಚನಾ, ದೇಹವನ್ನು ಚೀಲದಲ್ಲಿ ತುಂಬಿಸಿ ಟ್ಯಾಕ್ಸಿ ಮೂಲಕ ಬೆಂಗಳೂರಿಗೆ ಹೊರಟಿದ್ದರು. ಆದರೆ ಅದಕ್ಕೂ ಮುನ್ನ ಚಿತ್ರದುರ್ಗದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಕೊಠಡಿಯಲ್ಲಿ ತಪಾಸಣೆ ನಡೆಸಿದ ಪೊಲೀಸರಿಗೆ ಒಂದು ಚಿಕ್ಕ ಹಾಗೂ ಇನ್ನೊಂದು ದೊಡ್ಡ ಗಾತ್ರದ ಎರಡು ಕೆಮ್ಮಿನ ಸಿರಪ್‌ನ ಖಾಲಿ ಬಾಟಲಿಗಳು ದೊರಕಿವೆ. “ಮಗುವಿನ ದೇಹದ ಮರಣೋತ್ತರ ಪರೀಕ್ಷೆಯು, ಉಸಿರುಗಟ್ಟಿಸಿ ಕೊಂದಿರುವ ಸಾಧ್ಯತೆಯನ್ನು ಸೂಚಿಸಿದೆ. ಮಗು ಒದ್ದಾಡಿದ ಯಾವ ಸೂಚನೆಯೂ ಇಲ್ಲ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಮಗುವನ್ನು ಸಾಯಿಸುವುದಕ್ಕೂ ಮುನ್ನ ಮಹಿಳೆ ಅವನಿಗೆ ಭಾರಿ ಡೋಸ್‌ನ ಕೆಮ್ಮಿನ ಸಿರಪ್ ನೀಡಿರುವ ಸಾಧ್ಯತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.
ತಮಗೆ ಕೆಮ್ಮು ಇರುವುದರಿಂದ ಸಣ್ಣ ಬಾಟಲಿಯ ಸಿರಪ್ ತಂದುಕೊಡುವಂತೆ ಸುಚನಾ ತಮಗೆ ಕೇಳಿದ್ದಾಗಿ ಅಪಾರ್ಟ್‌ಮೆಂಟ್ ಸಿಬ್ಬಂದಿ ತಿಳಿಸಿದ್ದಾರೆ. ದೊಡ್ಡ ಬಾಟಲಿಯನ್ನು ಅವರೇ ತಂದಿರುವ ಸಾಧ್ಯತೆ ಇದೆ. ಇದು ಪೂರ್ವನಿಯೋಜಿತ ಕೊಲೆಯ ರೀತಿ ಕಾಣಿಸುತ್ತಿದೆ ಎಂದಿದ್ದಾರೆ. ಆದರೆ ತಾವು ಕೊಲೆ ಮಾಡಿಲ್ಲ ಎಂದು ಸುಚನಾ ವಾದಿಸಿದ್ದಾರೆ. ತಾವು ನಿದ್ದೆಯಿಂದ ಏಳುವ ಹೊತ್ತಿಗೆ ಮಗು ಸತ್ತು ಹೋಗಿತ್ತು ಎಂದು ಹೇಳಿದ್ದಾರೆ.