ನನ್ನ ಮೇಲೆ ಅತ್ಯಾಚಾರ ಆಗಿರುವ ಸಾಧ್ಯತೆ ಇದ್ದು ತನಿಖೆ ಮಾಡಿ ಎಂದು ಕಂಪ್ಲೆಂಟ್ ನೀಡಿದ ಯುವತಿ
ಬೆಂಗಳೂರು : ಪೊಲೀಸ್ ಠಾಣೆಗೆ ಒಂದು ವಿಚಿತ್ರ ದೂರು ಬಂದಿದ್ದು, ಯುವತಿಯೊಬ್ಬಳು ನನ್ನ ಮೇಲೆ ಗ್ಯಾಂಗ್ ರೇಪ್ ಆಗಿರುವ ಸಾಧ್ಯತೆ ಇದ್ದು, ಅದರ ಬಗ್ಗೆ ತನಿಖೆ ನಡೆಸಿ ಎಂದು ಪೊಲೀಸ್ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಯುವತಿ ಪಬ್ ಗೆ ತೆರಳಿದ್ದ ವೇಳೆ ಪ್ರಜ್ಞೆ ತಪ್ಪಿಸಿ ತನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸ್ ಮೂಲಗಳ ಪ್ರಕಾರ ಕಳೆದ ಡಿ.12ರ ರಾತ್ರಿ ಸಂತ್ರಸ್ತೆ ಕೋರಮಂಗಲದ ಪಬ್ವೊಂದಕ್ಕೆ ಹೋಗಿದ್ದು, ಬಳಿಕ ಏನು ಆಯಿತೋ ಏನೋ ಆಕೆಗೆ ಪ್ರಜ್ಞೆ ಬಂದಾಗ ಆಡುಗೋಡಿಯ ದೇವೇಗೌಡ ಲೇಔಟ್ ಬಳಿ ಇದ್ದುದ್ದಾಗಿ ಹೇಳಿದ್ದಾಳೆ. ತಾನು ಅಲ್ಲಿಗೆ ಹೇಗೆ ಬಂದೆ ಎಂಬುದೇ ತಿಳಿದಿಲ್ಲ ಎಂದಿದ್ದಾಳೆ. ಕೂಡಲೇ ಸ್ಥಳೀಯರ ನೆರವಿನೊಂದಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ತನ್ನ ದೇಹದ ಮೇಲೆ ತರಚು ಗಾಯಗಳಾಗಿದ್ದು, ಗ್ಯಾಂಗ್ ರೇಪ್ ಆಗಿದೆ ಎಂಬ ಶಂಕೆ ಇದೆ ಎಂದು ದೂರು ನೀಡಿದ್ದಾಳೆ.
ಯುವತಿಯೊಬ್ಬಳ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂಬ ಆರೋಪ ಹಿನ್ನೆಲೆ ದೂರು ದಾಖಲಿಸಿಕೊಂಡಿರುವ ಕೋರಮಂಗಲ ಠಾಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಯುವತಿ ಹೇಳಿದ ಘಟನೆ ನಡೆದ ಸ್ಥಳದ ಸುಮಾರು 60 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಪಬ್ನಲ್ಲಿ ಪ್ರಜ್ಞಾಹೀನಳಾಗಿದ್ದಳು. ಬಳಿಕ ಆಕೆ ಗಲಾಟೆ ಮಾಡಿದ ಹಿನ್ನಲೆಯಲ್ಲಿ ಪಬ್ ನಿಂದ ಹೊರ ಹಾಕಲಾಯಿತು. ಬಳಿಕ ಹೊಯ್ಸಳ ಪೊಲೀಸರು ಆಕೆಗೆ ಆಟೋರಿಕ್ಷಾವನ್ನು ಬುಕ್ ಮಾಡಲು ಸಹಾಯ ಮಾಡಿದರು ಮತ್ತು ಅವಳು ಮನೆಗೆ ಹೋದಳು. ಮನೆಗೆ ತಲುಪಿದ ನಂತರ, ಒಬ್ಬ ವ್ಯಕ್ತಿ ತನ್ನೊಂದಿಗೆ ಪಬ್ನಲ್ಲಿ ಸ್ವಲ್ಪ ಸಮಯ ಕಳೆದಿದ್ದಾನೆ ಮತ್ತು ಅವಳ ಮೇಲೆ ಅತ್ಯಾಚಾರ ಮಾಡಿರಬಹುದು ಎಂದು ಆಕೆ ನೆನಪಿಸಿಕೊಂಡಿದ್ದಾಳೆ ಎಂದು ಅಧಿಕಾರಿ ಹೇಳಿದರು.