‘ನಾನು ಕರಸೇವಕ, ನನ್ನನ್ನೂ ಬಂಧಿಸಿ ಅಭಿಯಾನ ಪ್ರಾರಂಭ’- ಸುನೀಲ್ ಕುಮಾರ್
ಬೆಂಗಳೂರು: ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ನಾನೊಬ್ಬ ಕರಸೇವಕ, ನನ್ನನ್ನೂ ಬಂಧಿಸಿ ಎಂಬ ಅಭಿಯಾನ ಇಂದಿನಿಂದ ಪ್ರಾರಂಭವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, 1990 ಮತ್ತು 92ರ ಕರಸೇವೆಯಲ್ಲಿ ಕರ್ನಾಟಕದಿಂದಲೂ ಸಾವಿರಾರು ಜನರು ಅವತ್ತಿನ ಸರಕಾರದ ಬೆದರಿಕೆಗೂ ಬಗ್ಗದೆ ಭಾಗವಹಿಸಿದ್ದರು. ಇವತ್ತು ಶ್ರೀರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಕೂಡ ಕರಸೇವಕರು, ರಾಮಭಕ್ತರನ್ನು ಬೆದರಿಸುವ, ಭಯ ಪಡಿಸುವ ತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ನಾವೆಲ್ಲರೂ ಈ ಹೋರಾಟದಲ್ಲಿ ಭಾಗವಹಿಸಿದವರು. ರಾಮಮಂದಿರದ ನಿರ್ಮಾಣವು ಬಿಜೆಪಿಯ ಬದ್ಧತೆ. ನಮ್ಮ ಪ್ರಣಾಳಿಕೆಯಲ್ಲಿ ಹತ್ತಾರು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇವೆ. ರಾಮಮಂದಿರವು ಒಂದು ರಾಜಕೀಯ ವಸ್ತುವಲ್ಲ. ಅದೊಂದು ಭಾವನೆ ಎಂದಿದ್ದಾರೆ.
ನಮ್ಮ ಈ ಅಭಿಯಾನ ಮುಂದುವರೆಯಲಿದ್ದು, ರಾಮಭಕ್ತರನ್ನು ಬೆದರಿಸುವ ಕಾರ್ಯವನ್ನು ಸರಕಾರ ಕೈಬಿಡಬೇಕು. ಮಂದಿರ ನಿರ್ಮಾಣ ಕಾರ್ಯದಲ್ಲಿ ಸರಕಾರವೂ ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.