Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಾನು ಪ್ರಧಾನಿಯಾಗಿ ಅಲ್ಲ, ಓರ್ವ ಹಿಂದೂ ಆಗಿ ಬಂದಿದ್ದೇನೆ : ರಾಮಕಥೆಯಲ್ಲಿ ಪಾಲ್ಗೊಂಡ ಬ್ರಿಟನ್ ಪ್ರಧಾನಿ ರಿಷಿ ಸುನಕ್

ಬ್ರಿಟನ್‌: ‘ನಾನು ಪ್ರಧಾನಿಯಾಗಿ ಅಲ್ಲ, ಓರ್ವ ಹಿಂದೂ ಆಗಿ ಬಂದಿದ್ದೇನೆ’ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ. ಕೇಂಬ್ರಿಡ್ಜ್​ ವಿಶ್ವವಿದ್ಯಾಲಯದ ಜೀಸಸ್ ಕಾಲೇಜಿನಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದೇ ರಾಮಕಥಾ ಕಾರ್ಯಕ್ರಮ ನಡೆಯಿತು. ಈ ವೇಳೆ ಇಲ್ಲಿಗೆ ಭೇಟಿ ನೀಡಿದ ರಿಷಿ ಸುನಕ್ ಅವರು, “ಜೈ ಸಿಯಾ ರಾಮ್” ಎಂದು ಹೇಳಿ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಸುನಕ್ ಅವರ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ‘ಭಾರತದ ಸ್ವಾತಂತ್ರ್ಯ ದಿನದಂದು ಮೊರಾರಿ ಬಾಪು ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬಾ ಸಂತೋಷವಾಗಿದೆ. ಬಾಪು ಅವರೇ ನಾನು ಇಂದು ಪ್ರಧಾನಿಯಾಗಿ ಇಲ್ಲಿಗೆ ಬಂದಿಲ್ಲ. ಒಬ್ಬ ಹಿಂದೂ ಆಗಿ ಬಂದಿದ್ದೇನೆ‘ ಎಂದು ಹೇಳಿದರು. ‘ನಂಬಿಕೆ ಎನ್ನುವುದು ಅವರ ಅವರ ವೈಯಕ್ತಿಕ ವಿಷಯವಾಗಿದೆ. ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ನಾನಿಟ್ಟಿರುವ ನಂಬಿಕೆ ನನಗೆ ಮಾರ್ಗದರ್ಶನ ನೀಡಿದೆ. ಪ್ರಧಾನಿಯಾಗುವುದು ದೊಡ್ಡ ಗೌರವ, ಆದರೆ ಅದಕ್ಕೆ ಅನೇಕ ಕಷ್ಟಗಳನ್ನು ಎದುರಿಸಬೇಕು. ನಂಬಿಕೆ ನನಗೆ ಆ ಧೈರ್ಯ, ಶಕ್ತಿ ನೀಡಿದೆ’ ಎಂದು ಹೇಳಿದರು. ‘ರಾಮಾಯಣ, ಭಗವದ್ಗೀತೆ ಮತ್ತು ಹನುಮಾನ್ ಚಾಲೀಸಾ ನೆನಪಿಸಿಕೊಂಡು ಇಲ್ಲಿಗೆ ಬಂದಿದ್ದೇನೆ. ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಲು, ದೇಶದ ಆಡಳಿತವನ್ನು ಸುಗಮವಾಗಿ ನಡೆಸಲು ನನಗೆ ಶ್ರೀರಾಮನು ಸ್ಫೂರ್ತಿ ನೀಡಿದ್ದಾನೆ’ ಎಂದರು. ಈ ವೇಳೆ ಬಾಲ್ಯದ ಕೆಲವೊಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ. ರಿಷಿ ಸುನಕ್ ‘ರಾಮ ಕಥಾ’ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.