Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನಿಫಾ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ, ಪುಣೆಯ ಸಂಚಾರಿ ಲ್ಯಾಬ್ ಕೋಝಿಕ್ಕೋಡ್ ಗೆ ರವಾನೆ

ಕೋಯಿಕ್ಕೋಡ್ : ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಪ್ರಕರಣ ವರದಿಯಾಗಿದ್ದು, ಸೋಂಕಿತರ ಸಂಖ್ಯೆ 6ಕ್ಕೆ ಏರಿದ್ದು, ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಸೋಂಕಿಗೆ ಒಳಗಾಗಿರುವ 39 ವರ್ಷದ ವ್ಯಕ್ತಿ ಕೋಯಿಕ್ಕೋಡ್​ನ ಆಸ್ಪತ್ರೆಯ ನಿಗಾದಲ್ಲಿದ್ದು, ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿದ್ದು ‘ನಿಫಾ ಕೊರೊನಾಗಿಂತ ಸ್ವಲ್ಪ ಭಿನ್ನವಾಗಿದೆ. ಅದು ಅಷ್ಟು ಬೇಗ ಹರಡುವುದಿಲ್ಲ. ಇದು ಹಣ್ಣು ತಿನ್ನುವ ಬಾವಲಿಗಳಿಂದ ಹರಡುತ್ತದೆ. ಕೇಂದ್ರ ಆರೋಗ್ಯ ತಂಡ ಕೇರಳದ ಕೋಝಿಕ್ಕೋಡ್ ತಲುಪಿದೆ. ಈ ತಂಡ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಲಿದೆ. ಕೇರಳದ ಪ್ರದೇಶಗಳಲ್ಲಿ ಜೀನೋಮ್ ಸೀಕ್ವೆನ್ಸಿಂಗ್‌ಗೆ ಸಿದ್ಧತೆ ಸಹ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆ ಕೋಯಿಕ್ಕೋಡ್ ಗೆ ಸಂಚಾರಿ ಲ್ಯಾಬ್ ಕಳುಹಿಸಿಕೊಟ್ಟಿದ್ದು, ಇದು ಕ್ಷಿಪ್ರಗತಿಯಲ್ಲಿವೈರಸ್ ದೃಢಪಡಿಸಲು ನೆರವಾಗಲಿದೆ. ಬಿಎಸ್ ಎಲ್ -3 ನೇ ದರ್ಜೆಯ ಲ್ಯಾಬ್ ಹೊಂದಿರುವ ಈ ಲ್ಯಾಬ್ ದಕ್ಷಿಣ ಏಷ್ಯಾದ ಮೊದಲ ಸಂಚಾರಿ ಲ್ಯಾಬ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಕೋಯಿಕ್ಕೋಡ್​ನಲ್ಲಿ ಸೋಂಕು ಹರಡಿದ ಕಾರಣ, ಜಿಲ್ಲೆಯ ಸುಮಾರು 11 ವಾರ್ಡ್​ಗಳನ್ನು ಕಂಟೈನ್ಮೆಂಟ್​ ವಲಯ ಎಂದು ಘೋಷಿಸಲಾಗಿದೆ. ಜಿಲ್ಲಾಡಳಿತ ಶನಿವಾರ ಸೆಪ್ಟೆಂಬರ್ 16ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.