Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ನೈತಿಕ ದಿವಾಳಿತನದ ಸಾರಾಯಿ ಗ್ಯಾರೆಂಟಿ ಸರ್ಕಾರ’ – ಬೊಮ್ಮಾಯಿ ಕಿಡಿ

ಬೆಂಗಳೂರು: ರಾಜ್ಯ ಸರ್ಕಾರ ಪಂಚಾಯತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವುದು ಸರ್ಕಾರದ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.

ಒಂದೆಡೆ ಗ್ಯಾರೆಂಟಿ ಹೆಸರಲ್ಲಿ ಮಹಿಳೆಯರಿಗೆ 2000 ರೂ. ನೀಡುವುದಾಗಿ ಹೇಳುವ ಸರ್ಕಾರ ಅದೇ ಹಣವನ್ನು ಅವರ ಗಂಡಂದಿರಿಂದ ವಸೂಲಿ ಮಾಡಲು ಮದ್ಯ ಮಾರಾಟದ ಮಾರ್ಗ ಹುಡುಕಿಕೊಂಡಂತಿದೆ. ಹೆಂಡತಿಯ ದುಡ್ಡು ಗಂಡಂದಿರಿಂದ ಪಡೆಯುವ ಮನಿ ರಿಟರ್ನ್ ಪಾಲಿಸಿ ಹಾಕಿಕೊಂಡ ಹಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರಿ ಮದ್ಯದಂಡಗಿ ತೆರೆಯುತ್ತಿರುವುದಾಗಿ ಅಬಕಾರಿ ಸಚಿವರು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅಕ್ರಮ ತಡೆಯಲಾಗದಿದ್ದರೆ ನಿಮ್ಮ ಇಲಾಖೆ ಮಾಡುವುದಾದರೂ ಏನು ? ಗ್ಯಾರೆಂಟಿ ಯೋಜನೆಯಲ್ಲಿ ಮನೆ ಯಜಮಾನಿ ಹುಡುಕುವ ಹೆಸರಲ್ಲಿ ಅತ್ತೆ ಸೊಸೆ ನಡುವೆ ಜಗಳ ಹಚ್ಚಿರುವ ಸರ್ಕಾರ ಇನ್ನು ಸಾರಾಯಿ ಕುಡಿಯಲು ಹಣಕ್ಕಾಗಿ ಗಂಡ ಹೆಂಡಿರ ನಡುವೆ ಜಗಳ ಹಚ್ಚಲು ಮುಂದಾಗಿದೆ.

ಸರ್ಕಾರ ಆದಾಯ ಗಳಿಸಲು ಮದ್ಯ ಮಾರಾಟ ಮೊರೆ ಹೋದರೆ, ಸರ್ಕಾರದ ಗ್ಯಾರೆಂಟಿ ಪಡೆಯುವ ಮಹಿಳೆಯರೇ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಬರಗಾಲದಲ್ಲಿ ನೀರು ಕೊಡದಿರುವ ಸರ್ಕಾರ ಸಾರಾಯಿ ಕುಡಿಸಲು ಮುಂದಾಗಿರುವುದು ದೊಡ್ಡ ದುರಂತ. ಇದು ಸಾರಾಯಿ ಗ್ಯಾರೆಂಟಿ ಸರ್ಕಾರ ಎಂದು ಲೇವಡಿ ಮಾಡಿದ್ದಾರೆ.