Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ನೈಸ್‌ ರಸ್ತೆಯಲ್ಲಿ ಸುಟ್ಟು ಕರಕಲಾದ ಕಾರು: ಇಬ್ಬರು ಬಲಿ

ಬೆಂಗಳೂರು: ನೈಸ್‌ ರಸ್ತೆಯಲ್ಲಿ ಬೆಂಗಳೂರಿನ ನೈಸ್‌ ರಸ್ತೆಯಲ್ಲಿ ಸೋಮಪುರ ಬಳಿ ಇಂದು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 2 ವರ್ಷದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಮಗು ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೈಸೂರು ರಸ್ತೆ ಕಡೆಯಿಂದ ಕನಕಪುರ ರಸ್ತೆ ಕಡೆಗೆ ತೆರಳುತಿದ್ದ ಕಾರು, ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದು ಬಳಿಕ ಮೋರಿಯ ಗೋಡೆಗೆ ಗುದ್ದಿದೆ . ಕಾರು ಡಿಕ್ಕಿಯಾದ ರಭಸಕ್ಕೆ ಬೆಂಕಿ ಹತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿದೆ. ಒಂದೇ ಕುಟುಂಬದ ನಾಲ್ವರು ಕಾರಿನಲ್ಲಿ ತೆರಳುತ್ತಿದ್ದರು ಎಂದು ವರದಿಯಾಗಿದೆ.

ಕಾರಿನಲ್ಲಿದ್ದ ಸಿಂಧು ಹಾಗೂ ಎರಡು ವರ್ಷದ ಪುಟ್ಟ ಮಗು ಸಾವನ್ನಪ್ಪಿದ್ದಾರೆ. ಇನ್ನು ಗಾಯಾಳು ಮಹೇಂದ್ರ ಹಾಗೂ ಇನ್ನೊಂದು ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಗ್ಗೆ ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.