ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ: ದೇಹದಾರ್ಢ್ಯ ಪರೀಕ್ಷೆಯಲ್ಲಿ ಅಕ್ರಮ ಇಬ್ಬರು ಸಸ್ಪೆಂಡ್.!
ಬೀದರ್: ಶುಕ್ರವಾರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ನಡೆದ ದೇಹದಾರ್ಢ್ಯ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಲ್. ಚನ್ನಬಸವಣ್ಣ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಡಿಎಆರ್ ಪೊಲೀಸ್ ಕಾನ್ ಸ್ಟೆಬಲ್ ಐವಾನ್ ಮತ್ತು ಜನವಾಡ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಶಫಿಕ್ ಅಮಾನತುಗೊಂಡವರು.
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಬರ್ತಿಗೆ ಇತ್ತೀಚೆಗೆ ಲಿಖಿತ ಪರೀಕ್ಷೆ ನಡೆಸಲಾಗಿದ್ದು, ಪಾಸಾದವರಿಗೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ದೇಹದಾರ್ಢ್ಯ ಪರೀಕ್ಷೆ ಏರ್ಪಡಿಸಲಾಗಿತ್ತು. 1,600 ಮೀಟರ್ ಓಟವನ್ನು ಆರು ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ, 1,200 ಮೀಟರ್ ಮಾತ್ರ ಪೂರ್ಣಗೊಳಿಸಿದ್ದು, 4 ಸುತ್ತು ಪೂರ್ಣಗೊಳಿಸಿದ್ದೇನೆಂದು ಐವಾನ್ 5 ಸುಳ್ಳು ಮಾಹಿತಿ ನೀಡಿದ್ದರು. ಓಟದ ಸಮಯ ನೋಡಲು ಶಫೀಕ್ ಅವರನ್ನು ನಿಯೋಜಿಸಿದ್ದು, ಅವರು ಕೂಡ ಹಿರಿಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿದ್ದರು. ಈ ಕುರಿತಾಗಿ ಡಿವೈಎಸ್ಪಿ ಸಲ್ಲಿಸಿದ ವರದಿ, ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಇಬ್ಬರೂ ಸುಳ್ಳು ಮಾಹಿತಿ ನೀಡಿರುವುದು ಸಾಬೀತಾಗಿದ್ದು, ಅವರನ್ನು ಅಮಾನತು ಮಾಡಲಾಗಿದೆ.