‘ಪ್ರಜ್ವಲ್ ರೇವಣ್ಣ ಎನ್ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಅಲ್ಲ’- ಬಿಜೆಪಿ ನಾಯಕರ ಅಸಮಾಧಾನ
ಹಾಸನ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಹಾಸನದಿಂದ ಸ್ಪರ್ಧಿಸಲಿದ್ದು. ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕರೆಕೊಟ್ಟಿದ್ದಾರೆ.
ಈ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುವುದು ಖಚಿತವಾಗಿದೆ. ಇದರ ಮಧ್ಯೆ ಮಿತ್ರ ಪಕ್ಷವಾದ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಎನ್ಡಿಎ ಮೈತ್ರಿಕೂಟದ ಪಕ್ಷವಾಗಿ ಏಕಪಕ್ಷಿಯ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಮಾದ್ಯಮ ವಕ್ತಾರ ಜಿ ದೇವರಾಜೇಗೌಡ ಅಸಮಾಧನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಎನ್ಡಿಎ ಮೈತ್ರಿಕೂಟದ ಅಧಿಕೃತ ಅಭ್ಯರ್ಥಿ ಅಲ್ಲ. ನಮ್ಮ ಪಕ್ಷದ ರಾಜ್ಯ ಅದ್ಯಕ್ಷರೂ ಕೂಡ ಜೊತೆಯಲ್ಲಿ ಇದ್ದು ಜಂಟಿ ಹೇಳಿಕೆ ನೀಡಿದರೆ ಮಾತ್ರ ಅವರು ಮೈತ್ರಿ ಪಕ್ಷದ ಅಭ್ಯರ್ಥಿಯಾಗುತ್ತಾರೆ ಎಂದು ಸ್ಪಷ್ಟಪಡಿಸಿದರು.
ದೇವೇಗೌಡರ ಹೇಳಿಕೆ ಖಂಡನೀಯ. ಮೋದಿಯವರ ನೇತೃತ್ವದಲ್ಲಿ ಕಳಂಕಿತರಿಗೆ ಅವಕಾಶ ಇಲ್ಲ. ಪ್ರಜ್ವಲ್ ರೇವಣ್ಣ ಮೇಲಿನ ಆರೋಪ ಸಾಬೀತಾಗಿದೆ. ಹಾಗಾಗಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿಕೊಂಡರೆ ನಮ್ಮದೇನು ತಕರಾರು ಇಲ್ಲ. ಆದರೆ ಅವರು ಮೈತ್ರಿಕೂಟ ಅಥವಾ ಎಮ್ಡಿಎ ಅಭ್ಯರ್ಥಿಯಾಗಿ ಘೋಷಣೆ ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲೆಯ ಕಾರ್ಯಕರ್ತರು ಯಾರೂ ಕೂಡ ಗೊಂದಲಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.
ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ಶ್ರೀ ರಾಮದೇವರಕಟ್ಟೆ ಆವರಣದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಚುನಾಯಿತ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲಾ ಶಾಸಕರು, ಮಾಜಿ ಶಾಸಕರು ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳು ಒಮ್ಮತದಿಂದ ಪ್ರಜ್ವಲ್ ರೇವಣ್ಣನ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದ್ದರು.