Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಧಾನಿ ನರೇಂದ್ರ ಮೋದಿಗೆ ಈಜಿಪ್ಟ್ ನ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿ ಪ್ರದಾನ

ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದೇಶಗಳಿಂದ ಈಗಾಗಲೇ ಅನೇಕ ಪುರಸ್ಕಾರಗಳು ಲಭ್ಯವಾಗಿವೆ. ಈ ನಡುವೆ ರವಿವಾರ ಈಜಿಪ್ಟ್ ನ ಅತ್ಯುನ್ನತ ‘ಆರ್ಡರ್ ಆಫ್ ದಿ ನೈಲ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ತಮ್ಮ ದ್ವಿಪಕ್ಷೀಯ ಸಭೆಯ ಮೊದಲು ಮೋದಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಉಭಯ ನಾಯಕರು ತಮ್ಮ ಸಭೆಯಲ್ಲಿ ಮಹತ್ವದ ತಿಳುವಳಿಕೆ ಪತ್ರಗಳಿಗೆ(ಎಂಒಯು) ಸಹಿ ಹಾಕಿದರು. 1997 ರ ನಂತರ ಈಜಿಪ್ಟ್ ಗೆ ಭಾರತದ ಪ್ರಧಾನಿಯ ಮೊದಲ ಭೇಟಿ ಇದಾಗಿದೆ.

ಶನಿವಾರ ಕೈರೋದಲ್ಲಿರುವ ದೇಶದ 11 ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಮೋದಿ ಭೇಟಿ ನೀಡಿದರು. ಇದನ್ನು ಭಾರತದ ದಾವೂದಿ ಬೊಹ್ರಾ ಸಮುದಾಯದ ನೆರವಿನಿಂದ ಪುನರ್ ನಿರ್ಮಾಣ ಮಾಡಲಾಗಿದೆ. ಮೂರು ತಿಂಗಳ ಹಿಂದಷ್ಟೇ ಪೂರ್ಣಗೊಂಡ ಮಸೀದಿಯನ್ನು ಮೋದಿಗೆ ತೋರಿಸಲಾಯಿತು. ಅಲ್ ಹಕೀಮ್ ಕೈರೋದಲ್ಲಿನ ನಾಲ್ಕನೇ ಅತ್ಯಂತ ಹಳೆಯ ಮಸೀದಿ ಮತ್ತು ಈಜಿಪ್ಟ್ ರಾಜಧಾನಿಯಲ್ಲಿ ನಿರ್ಮಿಸಲಾದ ಎರಡನೇ ಫಾತಿಮಿಡ್ ಮಸೀದಿಯಾಗಿದೆ. ಇದು 13,560 ಚದರ ಮೀಟರ್‌ಗಳಷ್ಟು ವಿಸ್ತೀರ್ಣವನ್ನು ಹೊಂದಿದೆ.

ನಂತರ, ಹೆಲಿಯೊಪೊಲಿಸ್ ಕಾಮನ್‌ವೆಲ್ತ್ ಯುದ್ಧದ ಸ್ಮಶಾನಕ್ಕೂ ಭೇಟಿ ನೀಡಿದ ಪ್ರಧಾನ ಮಂತ್ರಿ, ಮೊದಲ ವಿಶ್ವಯುದ್ಧದ ಸಮಯದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ವೀರಾವೇಶದಿಂದ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಈ ಸ್ಮಾರಕವನ್ನು ಮೊದಲ ವಿಶ್ವ ಸಮರದಲ್ಲಿ ಈಜಿಪ್ಟ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಹೋರಾಡಿ ಮಡಿದ ಸುಮಾರು 4,000 ಭಾರತೀಯ ಸೈನಿಕರ ಸ್ಮರಣಾರ್ಥ ನಿರ್ಮಿಸಲಾಗಿದೆ.