ಪ್ರಧಾನಿ ಮೋದಿಯ ಕೈ ಬಲಪಡಿಸಬೇಕು – ಹೆಚ್ ಡಿ ದೇವೇಗೌಡ ಕರೆ
ಹಾಸನ: ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಬಿಜೆಪಿ ಪಕ್ಷವನ್ನು ಎದುರಿಸಿದ್ದೆವು. ಆದರೆ ಈಗ ಅದೆಲ್ಲವನ್ನೂ ಮರೆತು ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು. ನಮ್ಮ ಪಕ್ಷ ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಅನ್ನು ಎದುರಿಸಲು ತೀರ್ಮಾನಿಸಿದೆ ಎಂದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ತಿಳಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆಯ ಎಕ್ಸಿಟ್ ಪೋಲ್ ರಿಪೋರ್ಟ್ ಬಂದಿದ್ದು, ಒಂದೆರಡು ಕಡೆಯಲ್ಲಿ ಕಾಂಗ್ರೆಸ್, ಒಂದೆರಡು ಕಡೆಯಲ್ಲಿ ಬಿಜೆಪಿ ಎಂದು ಸಮೀಕ್ಷೆಯ ವರದಿ ತಿಳಿಸಿದೆ. ವಿಧಾನಸಭಾ ಚುನಾವಣೆಯು ಲೋಕಸಭೆ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿರುವುದು ಎಂದರು.
ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅನ್ನು ಗ್ಯಾರೆಂಟಿ ಯೋಜನೆಯು ಕೈ ಹಿಡಿಯಿತು. ಸದ್ಯ ದೇಶದೆಲ್ಲೆಡೆ ಗ್ಯಾರೆಂಟಿ ಯೋಜನೆ ಪ್ರಾರಂಭವಾಗಿದೆ. ನನಗೆ ರಾಜ್ಯಸಭೆಯ ಸದಸ್ಯನಾಗಿ ಇನ್ನೂ ಎರಡುವರೆ ವರ್ಷಗಳ ಕಾಲ ಅವಕಾಶವಿದೆ. ಲೋಕಸಭೆ ಚುನಾವಣೆ ವೇಳೆ ಹೆಚ್ಡಿ ಕುಮಾರಸ್ವಾಮಿ ಕೂಡ ಆಗಮಿಸುತ್ತಾರೆ. ಇನ್ನು ಮುಂಬರುವ ಲೋಕಸಭೆಯಲ್ಲಿ ನಮಗೆ ಹಂಚಿಕೆಯಾಗಲಿರುವ ಸೀಟುಗಳ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಪ್ರಧಾನಿ, ಬಿಜೆಪಿ ಅಧ್ಯಕ್ಷರು, ಹೆಚ್ಡಿಕೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ದೇವೇಗೌಡ ಅವರು ತಿಳಿಸಿದ್ದಾರೆ.