ಫೇಸ್‌ಬುಕ್ ಸ್ನೇಹಿತನ ಭೇಟಿಗೆ ಪಾಕಿಸ್ತಾನಕ್ಕೆ ತೆರಳಿದ ಭಾರತೀಯ ವಿವಾಹಿತ ಮಹಿಳೆ
ಜೈಪುರ: ಭಾರತದ ಮಹಿಳೆಯೊಬ್ಬರು ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿರುವ ಘಟನೆ ನಡೆದಿದೆ
ರಾಜಸ್ಥಾನದ ಭಿವಾಡಿ ಜಿಲ್ಲೆಯ ವಿವಾಹಿತ ಮಹಿಳೆಯಾಗಿರುವ ಅಂಜು, ಫೇಸ್ ಬುಕ್ ನಲ್ಲಿ ಪರಿಚಯವಾದ ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ನಸ್ರುಲ್ಲಾ ಅವರನ್ನು ಭೇಟಿಯಾಗಲು ಪಾಕ್ ಗೆ ತಲುಪಿದ್ದಾರೆ.
ಅಂಜುಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ಪಾಕ್ ಮೂಲದ 29 ವರ್ಷದ ನಸ್ರುಲ್ಲಾನೊಂದಿಗೆ ಆತ್ಮೀಯವಾಗಿದ್ದರು. ಅಂಜು ಹಾಗೂ ನಸ್ರುಲ್ಲಾ ಪರಸ್ಪರ ಪ್ರೀತಿಸುತ್ತಿದ್ದು, ಪತಿಯ ಬಳಿ ಜೈಪುರಕ್ಕೆ ಹೋಗಿ ಬರುವುದಾಗಿ ಹೇಳಿ ಪ್ರಿಯಕರನನ್ನು ಭೇಟಿ ಆಗಲು ಪಾಕಿಸ್ತಾನಕ್ಕೆ ಅಂಜು ತೆರಳಿದ್ದಾರೆ ಎಂದು ತಿಳಿದಿದೆ.
ಅಂಜು ಅವರು ಪಾಕ್ ತಲುಪಿದ ಬಳಿಕ ಅವರನ್ನು ಆರಂಭದಲ್ಲಿ ಪೊಲೀಸ್ ಕಸ್ಟಡಿಯಲ್ಲಿರಿಸಿದ್ದರು. ಆ ಬಳಿಕ ಅವರು ಪ್ರಯಾಣದ ದಾಖಲೆಗಳನ್ನು ಪರಿಶೀಲಿಸಿದ ನಂತರ ಬಿಡುಗಡೆ ಮಾಡಲಾಯಿತು ಎಂದು ವರದಿ ತಿಳಿಸಿದೆ.
ಇತ್ತ ಅಂಜು ಪತಿ ಅರವಿಂದ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಕಳೆದ ಕೆಲ ದಿನಗಳ ಕಾಲ ಅಂಜು ಜೈಪುರಕ್ಕೆ ಹೋಗುವುದಾಗಿ ಹೇಳಿದ್ದಳು. ಆದರೆ 23 ಮಾಧ್ಯಮಗಳ ಮೂಲಕ ನನಗೆ ಪತ್ನಿ ಪಾಕಿಸ್ತಾನಕ್ಕೆ ಹೋಗಿದ್ದಾಳೆ ಎಂಬುದಾಗಿ ಗೊತ್ತಾಗಿದೆ. ಅದೇ ದಿನ ಸಂಜೆ 4 ಗಂಟೆಗೆ ಅಂಜು ವಾಟ್ಸಾಪ್ ಮೂಲಕ ಕರೆ ಮಾಡಿ ನಾನು ಲಾಹೋರ್ ನಲ್ಲಿದ್ದೇನೆ. ಮೂರು- ನಾಲ್ಕು ದಿನದಲ್ಲಿ ಬರುವುದಾಗಿ ಹೇಳಿದ್ದಾಳೆ. ವಿದೇಶದಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸಿದ ಕಾರಣ 2020 ರಲ್ಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾಳೆ. ಅವಳು ಶೀಘ್ರದಲ್ಲಿ ಬರುತ್ತಾಳೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅಂಜು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ನಂತರ ಅರವಿಂದ್ ಅವರೊಂದಿಗೆ ಮದುವೆಯಾಗಿದ್ದಾರೆ. ಅರವಿಂದ್ ಅವರು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಅಂಜು ಅವರ ಸಹೋದರನೊಂದಿಗೆ ಭಿವಾಡಿಯಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ವಾಸವಾಗಿದ್ದಾರೆ ಎನ್ನಲಾಗುತ್ತಿದೆ.