Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಬಸವಣ್ಣ, ಕನಕದಾಸ, ಅಂಬೇಡ್ಕರ್, ವೇಮನ ಯಾರೂ ಒಂದು ಜಾತಿಗೆ ಸೀಮಿತರಾಗದೆ ಮನುಕುಲಕ್ಕೆ ಸೇರಿದವರು’- ಸಿಎಂ

ಬೆಂಗಳೂರು:ಬಸವಣ್ಣ, ಕನಕದಾಸ, ಅಂಬೇಡ್ಕರ್, ವೇಮನ ಯಾರೂ ಒಂದು ಜಾತಿಗೆ ಸೀಮಿತರಾದವರಲ್ಲ. ಇವರೆಲ್ಲರೂ ವಿಶ್ವ ಮಾನವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶ್ರೀ ಮಹಾಯೋಗಿ ವೇಮನ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ವೇಮನರಾದಿಯಾಗಿ ಬಸವಾದಿ ಶರಣರು ಮನುಕುಲದ ಆಸ್ತಿ. ಪ್ರತೀ ಮಗುವೂ ಹುಟ್ಟುತ್ತಾ ವಿಶ್ವ ಮಾನವ. ಬೆಳೆಯುತ್ತಾ ಅಲ್ಪಮಾನವರಾಗಿ ಬಿಡುತ್ತಾರೆ ಎಂದು ಕುವೆಂಪು ಹೇಳಿರುವ ಮಾತು ಸತ್ಯ. ವೇಮನ ಅವರು ಆಕಸ್ಮಿಕವಾಗಿ ರೆಡ್ಡಿ ಸಮುದಾಯದಲ್ಲಿ ಹುಟ್ಟಿದ್ದರೂ ಅವರು ಇಡಿ ಮನುಕುಲಕ್ಕೆ ಬೇಕಾದವರಾಗಿದ್ದರು ಎಂದು ವಿವರಿಸಿದರು.

ಶಿಕ್ಷಣ ಕಲಿತು ನಾವು ಮೌಡ್ಯ ಆಚರಿಸಬಾರದು.‌ ಶಿಕ್ಷಣದ ಬೆಳಕಿನಿಂದ ನಾವು ಮೌಡ್ಯದಿಂದ ಹೊರಗೆ ಬರಬೇಕು.

ರೆಡ್ಡಿ ಜನ ಸಂಘದ ಶಿಕ್ಷಣ ಸಂಸ್ಥೆಗೆ ಜಮೀನು ಒದಗಿಸಲು ಸರ್ಕಾರ ಸಿದ್ದವಿದೆ. ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಪುತ್ಥಳಿಯನ್ನು ವಿಧಾನಸೌಧದಲ್ಲಿ ಹಾಕಲು ಅವಕಾಶ ಕಲ್ಪಿಸಲಾಗುವುದು ಎಂದರು.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆದಾಗ ಸರ್ಕಾರವೇ ವೇಮನ ಜಯಂತಿ ಆಚರಿಸಲು ಆದೇಶಿಸಿದ್ದೆ . ನಮ್ಮ ಸರ್ಕಾರ ಎಲ್ಲಾ ಜಾತಿ ಮತ್ತು ಧರ್ಮದ ಬಡವರ ಪರವಾಗಿ ಇರುತ್ತದೆ. ಎಲ್ಲಾ ಜಾತಿಯ ಬಡವರು ಮತ್ತು ಮಧ್ಯಮ ವರ್ಗದವರ ಪರವಾಗಿ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ, ಜಾರಿಗೆ ತರುತ್ತಿದೆ ಎಂದು ವಿವರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷರಾದ ಎಸ್.ಜಯರಾಮ ರೆಡ್ಡಿ, ಗಂಗಾವತಿ ಶಾಸಕರಾದ ಜನಾರ್ಧನರೆಡ್ಡಿ, ಮಾಜಿ ಸಚಿವ ಎಚ್.ಎಂ.ರೇವಣ್ಣ ಉಪಸ್ಥಿತರಿದ್ದರು.

ಲೇಖಕಿ ಹಾಗೂ ಜನಪದ ತಜ್ಞೆ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು.