Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಹುನಿರೀಕ್ಷಿತ ಚಂದ್ರಯಾನ-3 ಕ್ಕೆ ಕ್ಷಣಗಣನೆ: ಅಪರಾಹ್ನ 2.35ಕ್ಕೆ ನಭಕ್ಕೆ

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ವಿಜ್ಞಾನಿಗಳು ಭಾರತದ ಬಹು ನಿರೀಕ್ಷಿತ ಚಂದ್ರಯಾನ-3 ಉಡಾವಣೆಗೆ ಸಜ್ಜಾಗಿದ್ದಾರೆ. ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಭಾರತೀಯ ಕಾಲಮಾನ ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಲಿದೆ.

2019ರಲ್ಲಿ ಚಂದ್ರಯಾನ 2 ಹೆಸರಿನಲ್ಲಿ ಮತ್ತೊಂದು ಪ್ರಯೋಗ ಮಾಡಲಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ‘ಚಂದ್ರಯಾನ-2’ರ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಸಾಧ್ಯವಾಗದೇ ಅಪ್ಪಳಿಸಿ, ವೈಫಲ್ಯ ಕಂಡಿತ್ತು. ಅದರ ಮುಂದುವರಿದ ಭಾಗವಾಗಿರುವ ಚಂದ್ರಯಾನ-3 ಉಪಗ್ರಹ ಎಲ್ ವಿಎಂ3 – ಎಂ4 ರಾಕೆಟ್ ನ್ನು ಹೊತ್ತು ಸಾಗಲಿದೆ.ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ.

ಉಪಗ್ರಹ ಇಳಿಯಲು ಗೊತ್ತುಪಡಿಸಿದ ಲ್ಯಾಂಡಿಂಗ್ ಕೇಂದ್ರ ಚಂದ್ರನ ದಕ್ಷಿಣ ಧ್ರುವವಾಗಿದೆ, ಚಂದ್ರನ ಮೇಲ್ಮೈ ಮೇಲೆ ಆಗಸ್ಟ್ 23 ಅಥವಾ 24 ರ ಸುಮಾರಿಗೆ ಲ್ಯಾಂಡಿಂಗ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು 14 ಭೂಮಿಯ ದಿನಗಳಿಗೆ ಸಮನಾಗಿರುತ್ತದೆ, ಚಂದ್ರಯಾನ-3 ಚಂದ್ರನ ಪರಿಶೋಧನೆಗೆ ಸಿದ್ಧವಾಗಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದರೆ ಮೊದಲ ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇಲ್ಲಿ ಸೂರ್ಯನ ಬೆಳಕು ಪ್ರವೇಶ ಮಾಡುವುದಿಲ್ಲ. ಇಲ್ಲಿ ಮೈನ ೨೩೦ ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು ಎಲೆಕ್ಟ್ರಾನಿಕ್ ಉಪಕರಣ ಗಳು ಕಾರ್ಯವೆಸಗುವಂತೆ ಮಾಡುವುದು ಸವಾಲಿನ ಕೆಲಸ.

ಚಂದ್ರಯಾನ-3 ರ ನೇರ ಉಡಾವಣೆಯನ್ನು ವೀಕ್ಷಿಸಲು ಇಸ್ರೋದ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿದ್ದು ಆಸಕ್ತರು ಉಡಾವಣೆಯ ರೋಚಕ ಕ್ಷಣವನ್ನು ಅನುಭವಿಸಬಹುದು.