Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಹುಮುಖ ಪ್ರತಿಭೆ ಜೊಸೆಫ್ ಮಥಾಯಸ್ ಇವರಿಗೆ ‘ಗಡಿನಾಡ ರತ್ನ ’ ಪ್ರಶಸ್ತಿ

ದುಬೈ: ಡಿ. 10 ರಂದು ದುಬೈಯಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕ ಆಯೋಜಿಸಿದ ದುಬೈ ಗಡಿನಾಡ ಉತ್ಸವ ದ್ವಿತೀಯ ವರ್ಷದ ಆವೃತ್ತಿಯಲ್ಲಿ ಅನಿವಾಸಿ ಉದ್ಯಮಿ ಸಮಾಜ ಸೇವಕ, ಗಾಯಕ, ನಟ ಹೀಗೆ ಬಹುಮುಖ ಪ್ರತಿಭೆಯ ಜೋಸೆಪ್ ಮಥಾಯಸ್ ಇವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ‘ಗಡಿನಾಡ ರತ್ನ ’ ಪ್ರಶಸ್ತಿ ನೀಡಿ ಗೌರವಿಸಿದರು.

ವುಡ್ಲೆಮ್ ಪಾರ್ಕ್ ಶಾಲೆಯ ಸಭಾಗೃಹದಲ್ಲಿ ಸರ್ವೋತ್ತಮ ಶೆಟ್ಟಿ ಅಬುದಾಬಿ ಇವರ ಅಧ್ಯಕ್ಷತೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಡಿ. ವಿ. ಸದಾನಂದಗೌಡ, ರಾಜ್ಯ ಸಭಾ ಸದಸ್ಯರಾದ ಡಾ| ಎಲ್. ಹನುಮಂತಯ್ಯ ಮತ್ತು ಮಂಜೇಶ್ವರ ಲೋಕಸಭಾ ಸದಸ್ಯರಾದ ಎ.ಕೆ.ಎಮ್. ಅಶ್ರಫ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಂಗಳೂರಿನ ಕುಪ್ಪೆ ಪದವು ನಿವಾಸಿಯಾಗಿರುವ ಜೋಸೆಫ್ ಮಥಾಯಸ್ ಅವರು ಮೆರಿಟ್ ಫ್ರೈಟ್ ಸಿಸ್ಟಮ್ಸ್ ಹೆಸರಿನಲ್ಲಿ ಗಲ್ಫ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಉದ್ಯಮ ಶಾಖೆಗಳನ್ನು ಹೊಂದಿದ್ದು ,ಸಾಕಷ್ಟು ಜನರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ.

ಪ್ರತೀ ವರ್ಷ ಸ್ವಾತಂತ್ರ್ಯೋತ್ಸವ ದಿನದಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕನಗರ ಯುವಕ ಸಂಘದ ಮೂಲಕ ಶಾಲಾ ಮಕ್ಕಳಿಗೆ ಸಮವಸ್ತ್ರ , ಹಿರಿಯ ನಾಗರಿಕರಿಗೆ ಸೀರೆ, ಧೋತಿ, ಸ್ವಉದ್ಯೋಗಿಗಳಿಗೆ ಸೈಕಲ್, ಹೊಲಿಗೆ ಯಂತ್ರ ಹಾಗೂ ಅಶಕ್ತ ವರ್ಗದವರಿಗೆ ವೈದ್ಯಕೀಯ ನೆರವನ್ನು ತಮ್ಮ ಮಾತಾಪಿತರ ಸ್ಮರಣಾರ್ಥ ಸುಮಾರು ಒಂದೂವರೆ ದಶಕದಿಂದ ನೀಡುತ್ತಾ ಬಂದಿದ್ದಾರೆ.

ಉತ್ತಮ ಗಾಯಕರೂ, ನಟರೂ ಆಗಿರುವ ಜೋಸೆಫ್ ಮಥಾಯಸ್ ದೇಶ ವಿದೇಶಗಳಲ್ಲಿ ನಡೆಯುವ ಕೊಂಕಣಿ, ಕನ್ನಡ, ತುಳು ಹೀಗೆ ಎಲ್ಲಾ ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೋಷಕರಾಗಿ ನೆರವಿನ ಹಸ್ತ ನೀಡಿದ್ದಾರೆ.

ತಮ್ಮ ಪ್ರತಿಭೆ ಮತ್ತು ಸಮಾಜ ಸೇವೆಗಾಗಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಜೋಸೆಫ್ ಮಥಾಯಸ್ ಅವರಿಗೆ ಶಾರ್ಜಾ ಕರ್ನಾಟಕ ಸಂಘ ಮಯೂರ ಪ್ರಶಸ್ತಿ ಹಾಗೂ ಗಲ್ಫ್ ಕನ್ನಡಿಗರ ಸಂಘ ‘ವಿಶ್ವ ಕನ್ನಡಿಗ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.