Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಾವಲಿಗಳು ಎಲ್ಲೆಡೆ ಇದ್ದರೂ ಕೇರಳದಲ್ಲೇ ನಿಫಾ ಸೋಂಕು ಹೆಚ್ಚಲು ಕಾರಣವೇನು ಗೊತ್ತಾ?

ರಾತ್ರಿ ಮಕ್ಕಳು ತಂಟೆ ಮಾಡಿದರೆ, ನಿದ್ದೆ ಮಾಡದಿದ್ದರೆ ಗುಮ್ಮಾ ಬರುತ್ತಾನೆ ಎಂದು ಹೇಳಿ ಸುಮ್ಮನಾಗಿಸುತ್ತೇವೆ. ಈ ಗುಮ್ಮಾ ಬೇರೆ ಯಾರೂ ಅಲ್ಲ ಬಾವಲಿಗಳು. ಅವುಗಳ ಕೂಗು ಮಕ್ಕಳಲ್ಲಿ ಸಣ್ಣದೊಂದು ಭಯ ಹುಟ್ಟಿಸಿ ಅವುಗಳು ಸುಮ್ಮನೆ ಮಲಗುವಂತೆ ಮಾಡುತ್ತಿದ್ದವು. ಆದರೆ ಇವತ್ತು ಮಕ್ಕಳು ಮಾತ್ರವಲ್ಲ ದೊಡ್ಡವರೂ ಬಾವಲಿಗಳನ್ನು ಕಂಡು ಭಯ ಪಡುವಂತೆ ಆಗಿದೆ.

ಕತ್ತಲಲ್ಲಿ ವಾಸ ಮಾಡಲು ಬಯಸುವ ಬಾವಲಿಗಳು ಮನೆ ಹತ್ತಿರ ಬಂದರೆ ಭಯವಾಗಲು ಶುರುವಾಗುತ್ತದೆ. ಯಾಕೆಂದರೆ ಹಲವಾರು ಸೋಂಕಿನ ಕಾಯಿಲೆಗಳು ಇದರಿಂದ ಹರಡುವುದು ವೈಜ್ಞಾನಿಕವಾಗಿ ದೃಢ ಪಟ್ಟಿದೆ. ಇದೀಗ ಕೇರಳದಲ್ಲಿ ಕಾಣಿಸಿರುವ ನಿಫಾ ಸೋಂಕಿನ ಮೂಲವು ಇದೇ ಆಗಿದೆ.

ಬಾವಲಿಗಳು ಎಲ್ಲೆಡೆಯೂ ಇರುತ್ತವೆ. ಆದರೆ ಕೇರಳದಲ್ಲೇ ನಿಫಾ ಮಾತ್ರವಲ್ಲ, ಕೆಲವೊಂದು ಸೋಂಕು ಕಾಯಿಲೆಗಳು ಪ್ರಾರಂಭವಾಗಿ ಕಾಣಿಸುತ್ತದೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಅದರಲ್ಲೂ ನಿಫಾ ಕೇರಳದಲ್ಲಿ ನಾಲ್ಕನೇ ಬಾರಿಗೆ ಕಾಣಿಸಿಕೊಂಡ ಮೇಲೆ ಹೆಚ್ಚಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಣ್ಣುಗಳನ್ನೇ ತಿನ್ನುವ ಬಾವಲಿಗಳ ಪ್ರಭೇದದಲ್ಲಿ ಪ್ಲೈಯಿಂಗ್ ಫಾಕ್ಸ್ ಎಂಬ ವೈರಾಣು ಇದ್ದು, ಇದರಿಂದ ನಿಫಾ ಹರಡುತ್ತದೆ ಎನ್ನುತ್ತಾರೆ ರಾಷ್ಟ್ರೀಯ ವೈರಾಣು ವಿಜ್ಞಾನ ಸಂಸ್ಥೆಯ ವಿಜ್ಞಾನಿ. ಆದರೆ ಕೇರಳದಲ್ಲೇ ಏಕೆ ಎಂಬುದರ ಗೊಂದಲ ಇನ್ನೂ ಹಾಗೆಯೇ ಇದೆ.

2018ರಲ್ಲಿ ಕೇರಳದಲ್ಲಿ ನಿಫಾ ಸೋಂಕಿಗೆ ತುತ್ತಾಗಿ 17 ಮಂದಿ ಮೃತಪಟ್ಟಿದ್ದರು. ಇದರ ಹಿನ್ನೆಲೆ ಹುಡುಕುತ್ತಾ ಹೋದಾಗ ಮಹಿಳೆಯೊಬ್ಬರು ಬರಿಗೈಲಿ ಬಾವಲಿಯನ್ನು ಮುಟ್ಟಿದ್ದರು ಎಂದು ತಿಳಿದಿತ್ತು. ಅವರಲ್ಲಿದ್ದ ವೈರಾಣು ಆ ಬಾವಲಿಯಲ್ಲೂ ಪತ್ತೆಯಾಗಿತ್ತು. ಬಳಿಕ 2019, 2021ರಲ್ಲೂ ನಿಫಾ ಕಾಣಿಸಿಕೊಂಡಿತ್ತು.

ವಿವಿಧ ಸಂಸ್ಥೆಗಳು ನಿಫಾ ವೈರಾಣು ಬಗ್ಗೆ ಅಧ್ಯಯನ ನಡೆಸುತ್ತಲೇ ಇದೆ. ಇಲ್ಲಿ ಕುತೂಹಲದ ಸಂಗತಿ ಎಂದರೆ ಕೋಯಿಕ್ಕೋಡ್ ಮತ್ತು ಮಲ್ಲಪ್ಪುರ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮಾತ್ರ ಈ ವೈರಸ್ ಕಾಣಿಸಿಕೊಳ್ಳುತ್ತಿದೆ. ಈ ಗ್ರಾಮ ಗಳೆಲ್ಲವೂ ಸುಮಾರು ಹತ್ತಾರು ಕಿಲೋಮೀಟರ್ ದೂರಗಳಲ್ಲಿ ಇವೆ.

ಫ್ಲೈಯಿಂಗ್ ಫಾಕ್ಸ್ ವೈರಾಣು ಗಳು ಬಾವಲಿಗಳಲ್ಲಿ ಸದಾ ಇರುತ್ತವೆ. ಅವುಗಳು ಹೊರ ಬಿದ್ದರೆ ಮಾತ್ರ ಅದು ಇತರರಿಗೆ ಹರಡುವ ಅಪಾಯ ಇರುತ್ತದೆ ಎನ್ನುವುದು ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜು ನಡೆಸಿದ ಅಧ್ಯಯನದಿಂದ ತಿಳಿದು ಬಂದಿತ್ತು. ಹೀಗಾಗಿ ಯಾವ ಸಂದರ್ಭದಲ್ಲಿ ಇದು ಬಾವಲಿಗಳಿಂದ ಮಲ, ಮೂತ್ರ, ಜೊಲ್ಲಿನ ಮೂಲಕ ಹೊರ ಬರುತ್ತದೆ ಎಂಬುದನ್ನು ಪತ್ತೆ ಮಾಡಲು ವಿಜ್ಞಾನಿಗಳ ತಂಡ ಗಮನ ಕೇಂದ್ರೀಕರಿಸಿತ್ತು.

2018- 19ರಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿದ್ದು ಮೇ ತಿಂಗಳಲ್ಲಿ. ಫ್ಲೈಯಿಂಗ್ ಫಾಕ್ಸ್ ಬಾವಲಿಗಳ ಸಂತಾನೋತ್ಪತ್ತಿ ಅವಧಿ ಡಿಸಂಬರ್- ಮೇ ತಿಂಗಳು. ಈ ಅವಧಿಯಲ್ಲಿ ಅವುಗಳ ಮೇಲೆ ಒತ್ತಡ ಹೆಚ್ಚಾಗಿ ನಿಫಾ ವೈರಾಣು ದೇಹದಿಂದ ಹೊರಬರುತ್ತದೆ ಎಂದು ತೀರ್ಮಾನಿಸಲಾಯಿತು. ಆದರೆ 2021ರಲ್ಲಿ ನಿಫಾ ಕಾಣಿಸಿಕೊಂಡಿದ್ದು ಸೆಪ್ಟೆಂಬರ್ ನಲ್ಲಿ. ಹೀಗಾಗಿ ನಿಫಾ ವೈರಸ್ ಹರಡಲು ಬಾವಲಿಗಳ ಮೇಲೆ ಬಾಹ್ಯ ಒತ್ತಡವೂ ಕಾರಣವಾಗುತ್ತಿದೆಯೇ ಎಂಬುದರತ್ತ ಕೇಂದ್ರೀಕರಿಸಿ ವಿಜ್ಞಾನಿಗಳ ತಂಡ ಅಧ್ಯಯನ ನಡೆಸುತ್ತಿದೆ.

ಸಾಮಾನ್ಯವಾಗಿ ನಿಫಾ ಕಾಣಿಸಿಕೊಂಡಿರುವ ಗ್ರಾಮಗಳ ಭೌಗೋಳಿಕ ಲಕ್ಷಣಗಳು ಒಂದೇ ರೀತಿ ಇವೆ. ಹೀಗಾಗಿ ಇಲ್ಲಿ ಫ್ಲೈಯಿಂಗ್ ಫಾಕ್ಸ್ ಬಾವಲಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಈ ಪ್ರದೇಶದಲ್ಲಿ ಅತಿಯಾದ ಉಷ್ಣಾಂಶ ಇದ್ದಾಗ ಮತ್ತು ಹೆಚ್ಚು ಮಳೆ ಕಾಣಿಸಿಕೊಂಡ ಅವಧಿಯಲ್ಲಿ ನಿಫಾ ಕಾಣಿಸಿಕೊಂಡಿದೆ. ಹೀಗಾಗಿ ಪರಿಸರ ಬದಲಾವಣೆ ಸಂದರ್ಭದಲ್ಲಿ ನಿಫಾ ವೈರಸ್ ಬಾವಲಿಗಳ ದೇಹದಿಂದ ಹೊರಬರುತ್ತದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಆದರೆ ಇದು ಇನ್ನು ದೃಢ ಪಟ್ಟಿಲ್ಲ.

ನಿಫಾ ಹರಡಲು ಮುಖ್ಯ ಕಾರಣ ಬಾವಲಿಗಳು ತಿಂದಿರುವ ಹಣ್ಣುಗಳ ಸೇವನೆಯಿಂದ ಇತರ ಪ್ರಾಣಿಗಳಿಗೆ ಹರಡಿ ಅವುಗಳ ಸಂಪರ್ಕಕ್ಕೆ ಬರುವ ಮನುಷ್ಯನಿಗೆ ಅಥವಾ ಮಾನವ ಅವುಗಳ ಜೊಲ್ಲು, ಮಲ, ಮೂತ್ರದ ನೇರ ಸಂಪರ್ಕಕ್ಕೆ ಬಂದರೆ ವೈರಾಣು ಮನುಷ್ಯನ ದೇಹ ಸೇರುತ್ತದೆ.
ಅತಿಯಾದ ಜ್ವರ, ತೀವ್ರ ತಲೆನೋವು, ಉಸಿರಾಟ ಸಮಸ್ಯೆ, ಮೈಕೈ ನೋವು, ವಾಂತಿ ಇದರ ಲಕ್ಷಣಗಳು. ಈವರೆಗೆ ನಿಫಾ ಸೋಂಕಿಗೆ ಔಷಧ ಕಂಡುಹಿಡಿದಿಲ್ಲ. ರೋಗ ಲಕ್ಷಣಗಳಿಗೆ ಮಾತ್ರ ಔಷಧ ನೀಡಲಾಗುತ್ತದೆ. ಸೋಂಕಿತರಲ್ಲಿ ಶೇ. 25ರಷ್ಟು ಮಂದಿಗೆ ಸಾವು ಖಚಿತ ಎನ್ನುತ್ತದೆ ಅಂಕಿಅಂಶಗಳು.

ನಿಫಾ ಸೋಂಕು ಕೇರಳದಲ್ಲಿ ಮಾತ್ರವಲ್ಲಿ ಮಲೇಷ್ಯಾ, ಸಿಂಗಾಪುರ, ಬಾಂಗ್ಲಾದೇಶದಲ್ಲೂ ಕಾಣಿಸಿಕೊಂಡಿತ್ತು. ಇಲ್ಲಿ ಬಾವಲಿ, ಹಂದಿಗಳಿಂದ ಮನುಷ್ಯನಿಗೆ ಸೋಂಕು ತಗುಲಿರುವುದು ಪತ್ತೆಯಾಗಿತ್ತು.