Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಬಿಜೆಪಿಯಿಂದ ಕಾವೇರಿ ಜಲಾನಯನ ತಾಲೂಕುಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ’: ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದ ತಾಲೂಕುಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕಾವೇರಿ ಕೊಳ್ಳದ ಜಿಲ್ಲೆಗಳ ಪಕ್ಷದ ನಾಯಕರ ಜೊತೆ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಜೂನ್ ತಿಂಗಳಲ್ಲಿಯೇ ಕಾವೇರಿ ನೀರು ನಿರ್ವಹಣೆ ಆಗಬೇಕಿತ್ತು.ನಾವು 30%ರಷ್ಟು ನೀರನ್ನೂ ನಮ್ಮ ರೈತರಿಗೆ ಮಾಡಿಲ್ಲ. ತಮಿಳುನಾಡು ಎರಡನೇ ಬೆಳೆ ಬೆಳೆಯುತ್ತಿದೆ‌. ಸರ್ಕಾರ ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಮುಂದೆ ಸರಿಯಾಗಿ ಪ್ರತಿಪಾದಿಸಲಿಲ್ಲ. ಸರ್ಕಾರ ರಾಜ್ಯದ ಹಿತ ಬಲಿ ಕೊಟ್ಟು ತಮಿಳುನಾಡಿನ ಎರಡನೇ ಬೆಳೆಗೆ ನೀರು ಬಿಟ್ಟಿದೆ. ಇದರ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ನೀರು ಬಿಟ್ಟು ನಮಗೆ ಸಮಸ್ಯೆ ಆಗಿದೆ. ರಾಜ್ಯ ಸರ್ಕಾರ ರಕ್ಷಣಾತ್ಮಕ ಆಗಿ ನಡೆದುಕೊಳ್ಳುತ್ತಿದೆ. ಈ ಸರ್ಕಾರ ರಾಜ್ಯದ ನೀರಿನ ಹಕ್ಕು ರಕ್ಷಣೆ ಮಾಡಿಲ್ಲ. ನೀರಿನ ಹಕ್ಕು ರಕ್ಷಣೆ ಮಾಡುವ ಬದ್ಧತೆ, ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ವಾಸ್ತವಾಂಶ ಹೇಳಲಿ:
ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ರಾಜ್ಯದ ವಾಸ್ತವಾಂಶ ಇಡಲಿ ಸಿಡಬ್ಲ್ಯೂಆರ್‌ಸಿ ಮುಂದೆಯೂ ಸಮರ್ಥವಾದ ಮಾಡಲಿ, ಜಲ ಸಂಪನ್ಮೂಲ ಸಚಿವರಾದ ಡಿಕೆ ಶಿವಕುಮಾರ ಪರ ಅವರ ವೈಯಕ್ತಿಕ ಕೇಸ್ ಗಳಿಗೆ ಒಳ್ಳೊಳ್ಳೆಯ ವಕೀಲರು ಇದ್ದಾರೆ. ಹೀಗಾಗಿ ಅವರ ಕೇಸ್ ಗಳಲ್ಲಿ ಯಶಸ್ಸು ಸಿಗುತ್ತಿದೆ. ಅದೇ ರೀತಿ ಕಾವೇರಿ ವಿಚಾರಕ್ಕೂ ಒಳ್ಳೊಳ್ಳೆಯ ವಕೀಲರನ್ನು ನಿಯೋಜಿಸಲಿ ಎಂದು ಆಗ್ರಹಿಸಿದರು.

ಪ್ರತಿ ಎಕರೆಗೆ 25 ಸಾವಿರ ಪರಿಹಾರ:
ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ಸೂಕ್ತ ಸಮಯದಲ್ಲಿ ನೀರು ಬಿಡದೇ ಇರುವುದರಿಂದ ರೈತರ ಬೆಳೆ ಒಣಗಿದ್ದು, ಕಾವೇರಿ ಕೊಳ್ಳದ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರೂ ಪರಿಹಾರ ಕೊಡುವಂತೆ ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು
ನೀರು ಬಿಟ್ಟರೆ ಬಿಜೆಪಿಯಿಂದ ಕಾವೇರಿ ಜಲಾನಯನ ಪ್ರದೇಶಗಳ ಎಲ್ಲ ತಾಲ್ಲೂಕುಗಳಲ್ಲೂ ಕಾವೇರಿ ಜನ ಜಾಗೃತಿ ಯಾತ್ರೆ ಮಾಡಲು ನಿರ್ಧಾರಿಸಲಾಗಿದೆ. ಪಾದಯಾತ್ರೆ, ಸತ್ಯಾಗ್ರಹ, ಪ್ರತಿಭಟನೆ ರೂಪದಲ್ಲಿ ಹೋರಾಟ ನಡೆಸಲಾಗುವುದು. ಸೆಪ್ಟಂಬರ್ 21 ರಂದು ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದ್ದು, ಸೆ. 21 ರಂದು ಹೋರಾಟದ ಮುಂದಿನ ರೂಪುರೇಷೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರದ ಮಧ್ಯಸ್ಥಿಕೆ ಅಗತ್ಯವಿಲ್ಲ:
ರಾಜ್ಯ ಸರ್ಕಾರ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಎಳೆದು ತರುವ ಪ್ರಯತ್ನ ಮಾಡುತ್ತಿದೆ. ಇದರಲ್ಲಿ ಕೇಂದ್ರದ ಮಧ್ಯಸ್ಥಿಕೆ ಅಗತ್ಯ ಏ‌ನಿದೆ? ರಾಜ್ಯ ಸರ್ಕಾರ ಎಲ್ಲದಕ್ಕೂ ಕೇಂದ್ರವನ್ನು ಎಳೆದು ತರುವುದನ್ನು ಬಿಡಲಿ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವ ಮೂಲಕ ಕಂಟು ನೆಪ ಹುಡುಕುತ್ತಿದೆ. ಕೇಂದ್ರದ ಬದಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜತೆ ಈ ಸರ್ಕಾರ ಪತ್ರ ವ್ಯವಹಾರ ನಡೆಸಲಿ. ಡಿಎಂಕೆ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷ. ಕಾವೇರಿ ವಿಚಾರಕ್ಕೆ ಇವರು ಸ್ಟಾಲಿನ್ ಗೆ ಪತ್ರ ಬರೆಯಲಿ ನೋಡೋಣ ಎಂದು ಸವಾಲು ಹಾಕಿದರು