ಬ್ರೆಜಿಲ್ ನಲ್ಲಿ ಲಘು ವಿಮಾನ ಪತನ – ಮಗು ಸೇರಿ 12 ಸಾವು
ಬ್ರೆಜಿಲ್ : ಬ್ರೆಜಿಲ್ ನ ಅಮೆಜಾನ್ ಪ್ರದೇಶದಲ್ಲಿ ಸಂಭವಿಸಿದ ಭೀಕರ ಲಘು ವಿಮಾನ ಅಪಘಾತವೊಂದರಲ್ಲಿ ಒಂದು ಮಗು ಸೇರಿದಂತೆ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ.
ಬ್ರೆಜಿಲ್ ಪೆರು ಮತ್ತು ಬೊಲಿವಿಯಾದ ಗಡಿ ಸಮೀಪ ವಿಮಾನ ಪತನವಾಗಿದೆ ಎಂದು ತಿಳಿದು ಬಂದಿದೆ. ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಎಕರೆ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದಲ್ಲಿನ ಮುಖ್ಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿದೆ.
ಘಟನೆಯಲ್ಲಿ 9 ಮಂದಿ ವಯಸ್ಕರು ಮತ್ತು ಒಂದು ಮಗು ಸೇರಿದಂತೆ ಒಟ್ಟು ಹತ್ತು ಪ್ರಯಾಣಿಕರು ಮತ್ತು ಪೈಲಟ್ ಹಾಗೂ ಸಹ ಪೈಲಟ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಅನೇಕ ಪ್ರಯಾಣಿಕರು ವೈದ್ಯಕೀಯ ಆರೈಕೆಯ ನಂತರ ನೆರೆಯ ಅಮೆಜಾನಾಸ್ ರಾಜ್ಯಕ್ಕೆ ಮರಳುತ್ತಿದ್ದಾರೆ ಅನ್ನುವ ಮಾಹಿತಿ ಇದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.