ಭಾರತೀಯ ವಿದ್ಯಾರ್ಥಿಗಳಿಗೆ 1,40,000 ಕ್ಕೂ ಅಧಿಕ ವೀಸಾ ನೀಡಿ ದಾಖಲೆ ನಿರ್ಮಿಸಿದ ಅಮೇರಿಕಾ
ವಾಷಿಂಗ್ಟನ್: ಅಮೇರಿಕಾ ತನ್ನ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು 1,40,000 ಕ್ಕೂ ಅಧಿಕ ವೀಸಾಗಳನ್ನು ನೀಡುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ.
ಭಾರತದ ನಡುವಿನ ಸಂಬಂಧವನ್ನು ಉತ್ತಮಗೊಳಿಸುವ ಉದ್ದೇಶದಿಂದ ಅಮೇರಿಕಾ ಅಧ್ಯಕ್ಷ ಜೋ ಬಿಡನ್ ಅವರ ನೇತೃತ್ವದ ಸರ್ಕಾರ ಕಳೆದ ವರ್ಷ ಭಾರತೀಯ ವಿದ್ಯಾರ್ಥಿಗಳಿಗೆ 1,40,000 ಕ್ಕೂ ಹೆಚ್ಚು ವೀಸಾಗಳನ್ನು ವಿತರಿಸಿದೆ. ಜೊತೆಗೆ ವೀಸಾಗಾಗಿ ಕಾಯುವ ಸಮಯವೂ ಕಡಿಮೆಯಾಗಿದೆ ಎಂದು ತಿಳಿಸಿದೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವೀಸಾ ಕೆಲಸವನ್ನು ನಿರ್ವಹಿಸುವ ಜೂಲಿ ಸ್ಟಫಟ್ ಅವರು ಭಾರತದಲ್ಲಿನ ಯುಎಸ್ ಮಿಷನ್ಗಳು ಭಾರತೀಯ ವಿದ್ಯಾರ್ಥಿಗಳನ್ನು ಸಂದರ್ಶಿಸಲು ವಾರಕ್ಕೆ ಆರರಿಂದ ಏಳು ದಿನಗಳು ಕೆಲಸ ಮಾಡುತ್ತವೆ. ಈ ವರ್ಷ ನಾವು ಭಾರತದಲ್ಲಿ ಮಾಡಿರುವ ಕೆಲಸದ ಬಗ್ಗೆ ನಿಜವಾಗಿಯೂ ಹೆಮ್ಮೆ ಪಡಬೇಕು. ಇದೇ ಮೊದಲ ಬಾರಿಗೆ ನಾವು ಭಾರತದಲ್ಲಿ ಒಂದು ಮಿಲಿಯನ್ ವೀಸಾಗಳನ್ನು ನೀಡುವ ಗುರಿ ಹೊಂದಿದ್ದೆವು, ಅದನ್ನು ನಾವು ಪೂರೈಸಿದ್ದೇವೆ ಎಂದು ತಿಳಿಸಿದರು.
ಭಾರತದಲ್ಲಿ ಅರ್ಜಿ ಸಲ್ಲಿಸುವ ಕಾರ್ಮಿಕರು, ಸಿಬ್ಬಂದಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಅಮೇರಿಕಾಗೆ ಬರಲು ಈ ವರ್ಷ ದಾಖಲೆಯ ಸಂಖ್ಯೆಯಲ್ಲಿದ್ದಾರೆ. ಭಾರತವು ಈಗ ಅಮೇರಿಕಾದಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಮತ್ತು ಇತರ ಅನೇಕ ವೀಸಾ ವರ್ಗಗಳಿಗೆ ಅತಿದೊಡ್ಡ ಮೂಲ ದೇಶವಾಗಿದ್ದು, ಇದೊಂದು ಬಹು ಮುಖ್ಯ ವಿಷಯವಾಗಿದೆ. ಇನ್ನು ರಾಯಭಾರ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲದೇ, ಪ್ರಯಾಣಿಕರು ತಮ್ಮ ವೀಸಾಗಳನ್ನು ನವೀಕರಿಸಲು ಅನುವು ಮಾಡಿಕೊಡುವ ವೀಸಾ ಸಂದರ್ಶನ ಇಲ್ಲದೆ ಅಧಿಕಾರವನ್ನು ವಿಸ್ತರಿಸುವಂತಹ ಹೊಸ ಕ್ರಮಗಳಿಂದ ಒಂದು ಮಿಲಿಯನ್ ಗೂ ಹೆಚ್ಚು ವೀಸಾಗಳನ್ನು ವಿತರಿಸಲು ಸಾಧ್ಯವಾಯಿತು ಎಂದು ಜೂಲಿ ಸ್ಟಫಟ್ ತಿಳಿಸಿದ್ದಾರೆ.