Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತ ಶ್ರೀಲಂಕಾ ದೋಣಿ ಸೇವೆ : ಎರಡು ರಾಷ್ಟ್ರಗಳ ನಡುವೆ ದೀರ್ಘಕಾಲದ ಬಾಂಧವ್ಯವನ್ನು ಬಲಪಡಿಸುತ್ತದೆ- ಮೋದಿ

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ದೋಣಿ ಸೇವೆಯು ಸಂಪರ್ಕವನ್ನು ಹೆಚ್ಚಿಸುತ್ತದೆ, ವ್ಯಾಪಾರವನ್ನು ಉತ್ತೇಜಿಸುತ್ತದೆ ಮತ್ತು ಉಭಯ ದೇಶಗಳ ನಡುವಿನ ದೀರ್ಘ ಕಾಲದ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ತಮಿಳುನಾಡು ನಾಗಪಟ್ಟಣಂನಿಂದ ಶ್ರೀಲಂಕಾಕ್ಕೆ ದೋಣಿ ಸೇವೆಯ ಫ್ಲ್ಯಾಗ್-ಆಫ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ಮತ್ತು ಶ್ರೀಲಂಕಾ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಲ್ಲಿ ನಾವು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ನಾಗಪಟ್ಟಣಂ ಮತ್ತು ಕಂಕೆಸಂತುರೈ ನಡುವೆ ದೋಣಿ ಸೇವೆ ಪ್ರಾರಂಭವಾಗಿರುವುದು ನಮ್ಮ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಮೈಲಿಗಲ್ಲು ಆಗಿದೆ. ಇದರಿಂದ ಉಭಯ ದೇಶಗಳ ನಡುವೆ ಸಂಪರ್ಕ ಹಾಗೂ ವ್ಯಾಪಾರಕ್ಕೆ ಅನುಕೂಲವಾಗಲಿದ್ದು, ರಾಷ್ಟ್ರಗಳ ನಡುವಿನ ದೀರ್ಘಕಾಲದ ಬಾಂಧವ್ಯವನ್ನು ಬಲಪಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ.

ಕವಿ ಸುಬ್ರಮಣ್ಯ ಭಾರತಿಯ ಸಿಂಧು ನದಿಯ ಮಿಸಾಯಿ ಕವಿತೆಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಮಹಾ ಕವಿ ಸುಬ್ರಮಣ್ಯ ಭಾರತಿ ತಮ್ಮ ಸಿಂಧು ನದಿಯ ಮಿಸಾಯಿ ಹಾಡಿನಲ್ಲಿ ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ಸೇತುವೆಯ ಬಗ್ಗೆ ಮಾತನಾಡಿದ್ದಾರೆ. ಈ ದೋಣಿ ಸೇವೆಯು ಎಲ್ಲಾ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಜೀವಂತವಾಗಿ ತರುತ್ತದೆ ಎಂದಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ವಿಕ್ರಮಸಿಂಘೆ ಅವರ ಇತ್ತೀಚಿನ ಭೇಟಿಯ ಸಂದರ್ಭದಲ್ಲಿ ಎರಡೂ ದೇಶಗಳ ನಡುವಿನ ಆರ್ಥಿಕ ಪಾಲುದಾರಿಕೆಯ ದೃಷ್ಟಿಯಿಂದ ಈ ಸಂಪರ್ಕವು ಅನುಕೂಲವಾಗುತ್ತವೆ ಎಂದು ಹೇಳಿದರು.