ಭಾರೀ ಮಳೆ, ಭೂಕುಸಿತ, ಸತತ 3ನೇ ದಿನವೂ ಅಮರನಾಥ ಯಾತ್ರೆ ಸ್ಥಗಿತ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆ ಮತ್ತು ಭೂ ಕುಸಿತದಿಂದಾಗಿ ಅಮರನಾಥ ಯಾತ್ರೆಯನ್ನು ಭಾನುವಾರವೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನದ ದೃಷ್ಟಿಯಿಂದ ಇಂದು ಬೆಳಿಗ್ಗೆ ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸದಿಂದ ಯಾವುದೇ ಹೊಸ ಬ್ಯಾಚ್ ಯಾತ್ರಿಗಳಿಗೆ ಅವಕಾಶ ನೀಡಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಮತ್ತು ಭೂ ಕುಸಿತದಿಂದಾಗಿ ಜಮ್ಮು ಮತ್ತು ಗುಹಾ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಸಾವಿರಾರು ಯಾತ್ರಾರ್ಥಿಗಳು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ. ಎರಡೂ ಮಾರ್ಗಗಳಲ್ಲಿ ಯಾತ್ರಿಗಳಿಗೆ ಹೆಲಿಕಾಪ್ಟರ್ ಸೇವೆಗಳು ಲಭ್ಯವಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರ ರಾತ್ರಿಯಿಂದ ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ “ಯಾರೂ ಆತಂಕಕ್ಕೆ ಒಳಗಾಗಬೇಡಿ. ಹಿರಿಯ ಅಧಿಕಾರಿಗಳು ಪರಿಸ್ಥಿತಿ ಪರಿಶೀಲಿಸುತ್ತಿದ್ದಾರೆ’ ಎಂದಿದ್ದಾರೆ. ಈ ವರ್ಷದ 62 ದಿನಗಳ ಸುದೀರ್ಘ ಅಮರನಾಥ ಯಾತ್ರೆಯು ಜುಲೈ 1 ರಂದು ಪ್ರಾರಂಭವಾಯಿತು ಮತ್ತು ಶ್ರಾವಣ ಪೂರ್ಣಿಮಾ ಹಬ್ಬದ ಜೊತೆಗೆ ಆಗಸ್ಟ್ 31 ರಂದು ಕೊನೆಗೊಳ್ಳಲಿದೆ.