ಮಂಗಳೂರು: ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬಸ್ ನಲ್ಲಿಯೇ ಉಚಿತ ಕಂಪ್ಯೂಟರ್ ಕಲಿಕೆ
ಮಂಗಳೂರು: ಈ ಬಸ್ಸನ್ನೊಮ್ಮೆ ನೋಡಿದರೆ ಐಷಾರಾಮಿ ಬಸ್ ನಂತೆ ಕಾಣುತ್ತದೆ. ಈ ಬಸ್ನಲ್ಲಿ ಪ್ರಯಾಣಿಕರಿಗೆ ಕುಳಿತುಕೊಂಡು ಸಂಚರಿಸಲು ಆಸನದ ವ್ಯವಸ್ಥೆಯಿಲ್ಲ. ಬದಲಾಗಿ ಉದ್ದಕ್ಕೆ ಲ್ಯಾಪ್ ಟಾಪ್ ಜೋಡಿಸಲಾಗಿದೆ. ವಿಶೇಷವೆಂದರೆ ಈ ಬಸ್ ನಲ್ಲಿ ಜ್ಞಾನ ಸರಸ್ವತಿಯೇ ಸಂಚರಿಸುತ್ತಿದ್ದಾಳೆ. ಸ್ವಲ್ಪ ಗೊಂದಲ ಆಗ್ತಿದೆಯಾ… ಹಾಗಾದರೆ ಈ ಸುದ್ದಿಯನ್ನೊಮ್ಮೆ ನೋಡಿ
“ಕ್ಲಾಸ್ ಆನ್ ವ್ಹೀಲ್ಸ್” ಹೆಸರಿನಲ್ಲಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಲೋಕಾರ್ಪಣೆಯಾಗಿದೆ. ಮಂಗಳೂರಿನ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ತನ್ನ ದಶಮಾನೋತ್ಸವದ ಸ್ಮರಣಾರ್ಥ ಈ ಬಸ್ ಅನ್ನು ಕೊಡುಗೆಯಾಗಿ ನೀಡಿದೆ. ಸದ್ಯ ಪುತ್ತೂರು ತಾಲೂಕಿನ 7 ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಂಪ್ಯೂಟರ್ ಮೂಲಭೂತ ಶಿಕ್ಷಣವನ್ನು ನೀಡುವ ಗುರಿಯನ್ನು ಹೊಂದಿದೆ. ಬಳಿಕ ಬಸ್ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಾದ್ಯಂತ ಸಂಚರಿಸಲಿದೆ. ಐಷಾರಾಮಿ ಹವಾನಿಯಂತ್ರಿತ ಕಂಪ್ಯೂಟರ್ ಬಸ್ ಅನ್ನು ಸಂಪೂರ್ಣ ಕ್ಲಾಸ್ ರೂಂನಂತೆ ಪರಿವರ್ತಿಸಲಾಗಿದೆ. ಏಕಕಾಲದಲ್ಲಿ 16 ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣ ಪಡೆಯಲು 16 ಲ್ಯಾಪ್ ಟಾಪ್ ಕಂಪ್ಯೂಟರ್, ಕೀಪ್ಯಾಡ್, ಮೌಸ್, ಚಾರ್ಜರ್ಸ್ ಇದೆ. ಕಾನ್ಫರೆನ್ಸ್ ಗೆ ಪ್ರಾಜೆಕ್ಟರ್, ಪ್ರಸೆಂಟೇಶನ್ ಗೆ ಟಿವಿ, ಮ್ಯೂಸಿಕ್ ಸಿಸ್ಟಮ್ ವ್ಯವಸ್ಥೆ, ಮೈಕ್ ಸೌಂಡ್ ಸಿಸ್ಟಮ್, ಎಲ್ ಇಡಿ ಡಿಜಿಟಲ್ ಬೋರ್ಡ್ ಅಳವಡಿಸಲಾಗಿದೆ. ಜೊತೆಗೆ ವೈಫೈ, ಇಂಟರ್ನೆಟ್ ವ್ಯವಸ್ಥೆಯೂ ಇದೆ. ಕಲರ್ ಪ್ರಿಂಟರ್, ಫೋಟೊ ಕಾಪಿ ಸ್ಕ್ಯಾನರ್ ಮತ್ತು ಬಯೋಮೆಟ್ರಿಕ್ ಡಿವೈಸ್ ಅಳವಡಿಸಲಾಗಿದೆ. ತರಗತಿಯೊಳಗೆ ಹೋಗಲು ಬಸ್ ಗೆ ಎರಡು ಪ್ರವೇಶ ದ್ವಾರಗಳಿವೆ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕಕ್ಕೆ 6.8 ಕೆವಿಯ ಅತ್ಯಾಧುನಿಕ ಜನರೇಟರ್ ವ್ಯವಸ್ಥೆಯಿದೆ. ಈ ಬಸ್ ಗ್ರಾಮೀಣ ಪ್ರದೇಶಗಳ ಶಾಲೆಗಳ ಬಳಿ ಒಂದು ಗಂಟೆಗಳ ಕಾಲ ನಿಲ್ಲುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಕಂಪ್ಯೂಟರ್ ಶಿಕ್ಷಣ ಪಡೆಯಲು ಎರಡು ಶಿಕ್ಷಕಿಯರೂ ಈ ಬಸ್ ನಲ್ಲಿದ್ದಾರೆ. ಈ ಐಷಾರಾಮಿ ಬಸ್ ಗೆ 60 ಲಕ್ಷ ರೂ. ವೆಚ್ಚವಾಗಿದ್ದು, ಹೆಚ್ಚುವರಿ ಮೊತ್ತವನ್ನು ಎಂ.ಫ್ರೆಂಡ್ಸ್ ಟ್ರಸ್ಟ್ ಭರಿಸಿದೆ. ಈ ಕಂಪ್ಯೂಟರ್ ಡಿಜಿಟಲ್ ಬಸ್ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ.