ಮಕ್ಕಳು ಹೂ ಕಿತ್ತರೆಂದು ಅಂಗನವಾಡಿ ಶಿಕ್ಷಕಿಯ ಮೂಗು ಕತ್ತರಿಸಿದ ವ್ಯಕ್ತಿ
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ನಡೆದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದ್ದು, ವ್ಯಕ್ತಿಯೋರ್ವ ಅಂಗನವಾಡಿ ಶಿಕ್ಷಕಿಯ ಮೂಗು ಕತ್ತರಿಸಿ ರಾಕ್ಷಸೀಯ ಕೃತ್ಯವೆಸಗಿದ ಘಟನೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಲ್ಯಾಣಿ ಮೋರೆ ಎಂಬಾತ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಬೆಳಗಾವಿ ಬಸುರ್ತೆ ಗ್ರಾಮದ ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ (50) ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂಗು ತುಂಡರಿಸಿದ ಹಿನ್ನೆಲೆ ಶ್ವಾಸಕೋಶದಲ್ಲಿ ರಕ್ತ ಹೋಗಿ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಅಂಗನವಾಡಿ ಮಕ್ಕಳು ಆಟವಾಡುತ್ತಾ ಅಂಗನವಾಡಿ ಪಕ್ಕದಲ್ಲೇ ಇರುವ ಮನೆಯ ಆವರಣದಲ್ಲಿ ಬೆಳೆಯಲಾಗಿದ್ದ ಮಲ್ಲಿಗೆ ಹೂ ಕಿತ್ತಿದ್ದಕ್ಕೆ ಮನೆ ಮಾಲೀಕ ಕಲ್ಯಾಣಿ ಮೋರೆ ಅಂಗನವಾಡಿ ಸಹಾಯಕಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ. ಅಷ್ಟೇ ಅಲ್ಲದೇ ಆಕೆಯ ಮೂಗನ್ನು ಕತ್ತರಿಸಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.