ಮಗಳ ಅಂತ್ಯಸಂಸ್ಕಾರದ ನಂತರ ತಂದೆಗೆ ಶಾಕ್ – ನಾನಿನ್ನೂ ಬದುಕಿದ್ದೇನೆ ಅಪ್ಪಾ ಎಂದು ಕರೆ ಮಾಡಿದ ಪುತ್ರಿ
ಪಾಟ್ನಾ: ಬಿಹಾರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಗಳ ಅಂತ್ಯಸಂಸ್ಕಾರದ ಬಳಿಕ ಸ್ವತಃ ಮಗಳೇ ವಿಡಿಯೋ ಕಾಲ ಮಾಡಿ ‘ಅಪ್ಪಾ ನಾನಿನ್ನೂ ಬದುಕಿದ್ದೇನೆ’ ಎಂದು ಹೇಳಿದ್ದಾಳೆ. ಬಿಹಾರದ ಪುರ್ನಿಯಾದ ಅಕ್ಬರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಅಂಶು ಕುಮಾರಿ ಎಂಬ ಯುವತಿ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಳು. ಕುಟುಂಬಸ್ಥರು, ಪೊಲೀಸರು ಎಲ್ಲೆಡೆ ಹುಡುಕಾಡಿದ್ದರೂ ಅಂಶು ಕುಮಾರಿಯ ಪತ್ತೆಯೇ ಇರಲಿಲ್ಲ. ಕೆಲವು ದಿನಗಳ ಹಿಂದೆ ಕಾಲುವೆ ಒಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಮುಖವು ಗುರುತಿಸಲಾಗದಷ್ಟು ಉಬ್ಬಿಕೊಂಡಿತ್ತು. ಅದು ಕಾಣೆಯಾದ ಅಂಶು ಕುಮಾರಿಯದ್ದೇ ದೇಹ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿದ್ದರು. ಅಂತ್ಯ ಸಂಸ್ಕಾರದ ಬಳಿಕ ತಕ್ಷಣವೇ ಯುವತಿ ತಂದೆಗೆ ವಿಡಿಯೋ ಕರೆ ಮಾಡಿ, ʼಅಪ್ಪಾ ನಾನಿನ್ನೂ ಬದುಕಿದ್ದೇನೆʼ ಎಂದು ಅಳುತ್ತಾ ತಿಳಿಸಿದ್ದಾಳೆ. ಇದರಿಂದ ವಿಚಲಿತಗೊಂಡ ತಂದೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಶು ತನ್ನ ಪ್ರಿಯಕರನೊಂದಿಗೆ ಊರು ಬಿಟ್ಟಿದ್ದು, ಆತನನ್ನೇ ದೇವಸ್ಥಾನವೊಂದರಲ್ಲಿ ಮದುವೆಯಾಗಿ ಅತ್ತೆ ಮನೆಯಲ್ಲಿದ್ದಳು. ಈ ವೃತ್ತಾಂತವನ್ನೆಲ್ಲಾ ತಂದೆಗೆ ತಿಳಿಸಿದ ಅಂಶು, ಬದುಕಿರುವ ಮಾಹಿತಿಯನ್ನು ನೀಡಿ, ಕುಟುಂಬ ದುಃಖಪಡದಂತೆ ತಿಳಿಸಿದ್ದಾಳೆ. ಘಟನೆಯ ಬಗ್ಗೆ ತಿಳಿದ ನಂತರ, ವಾಸ್ತವವನ್ನು ತಿಳಿಯಲು ತಂದೆ ಅಂಶು ಮೊಬೈಲ್ ಫೋನ್‌ಗೆ ವಿಡಿಯೋ ಕರೆ ಮಾಡಿದ್ದಾನೆ. ಅವಳು ತನ್ನ ಅತ್ತೆಯ ಜೊತೆ ಚೆನ್ನಾಗಿಯೇ ಇದ್ದಾಳೆ ಎಂದು ಹೇಳಿದ್ದಾಳೆ. ಇನ್ನು, ಅಂತ್ಯ ಸಂಸ್ಕಾರಕ್ಕೊಳಗಾದ ಯುವತಿಯ ಗುರುತನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಇದೊಂದು ಮರ್ಯಾದಾ ಹತ್ಯೆ ಘಟನೆ ಆಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮೃತ ಯುವತಿಯ ಪೋಷಕರು ತಲೆ ಮರೆಸಿಕೊಂಡಿದ್ದಾರೆ ಎಂದು ಠಾಣಾಧಿಕಾರಿ ಹೇಳಿದ್ದಾರೆ.