Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮಣಿಪುರದಲ್ಲಿ ಹಿಂಸಾಚಾರದ ತನಿಖೆ ವಿಳಂಬ-ಸರಕಾರದ ಮೇಲೆ ಸುಪ್ರೀಮ್ ಕೋರ್ಟ್ ಆಕ್ರೋಶ

ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುಪ್ರೀಮ್ ಕೋರ್ಟ್ ವಿಚಾರಣೆ ನಡೆಸಿದೆ. ಹಿಂಸಾಚಾರ ಕುರಿತು ತನಿಖೆಯಲ್ಲಿ ಆಗಿರುವ ವಿಳಂಬ ಹಾಗೂ ನಿರ್ಲಕ್ಷದ ವಿರುದ್ಧ ಸುಪ್ರೀಮ್ ಕೋರ್ಟ್ ಮಣಿಪುರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪರಿಸ್ಥಿತಿ ರಾಜ್ಯ ಪೊಲೀಸರ ನಿಯಂತ್ರಣವನ್ನ ಮೀರಿದೆ ಎಂಬುದು ಸ್ಪಷ್ಟವಾಗಿದೆ. ವಿಚಾರಣೆಗೆ ಮಣಿಪುರ ಡಿಜಿಪಿ ಹಾಜರಾಗಬೇಕು ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ಸೂಚಿಸಿದ್ದಾರೆ. ಪ್ರಕರಣವನ್ನ ಸಿಬಿಐಗೆ ಹಸ್ತಾಂತರಿಸಬೇಕೆಂಬ ಬೇಡಿಕೆಯ ಬಗ್ಗೆ, ಎಫ್ಐಆರ್ ಸಹ ದಾಖಲಿಸಲಾಗುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ. 6,000 ಎಫ್ಐಆರ್‌ಗಳಲ್ಲಿ 50 ಎಫ್ಐಆರ್‌ಗಳನ್ನ ಸಿಬಿಐಗೆ ಹಸ್ತಾಂತರಿಸಲಾಗಿದೆ. ಉಳಿದ 5,950 ಎಫ್ಐಆರ್‌ಗಳ ಗತಿ ಏನು? ವೀಡಿಯೊ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸುವಲ್ಲಿ ಸಾಕಷ್ಟು ವಿಳಂಬವಾಗಿದೆ ಎಂಬುದು ಬಹಳ ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡುವ ವೀಡಿಯೊ ಹೊರಬಂದ ನಂತರ ಪೊಲೀಸರು ಅವರ ಹೇಳಿಕೆಯನ್ನ ದಾಖಲಿಸಿದ್ದಾರೆ ಎಂದು ತೋರುತ್ತದೆ ಎಂದು ಸುಪ್ರೀಮ್ ಕೋರ್ಟ್ ಛೀಮಾರಿ ಹಾಕಿದೆ.