ಮಣಿಪುರ ಹೊತ್ತಿ ಉರಿಯುತ್ತಿರುವಾಗ ಸಂಸತ್ತಿನಲ್ಲಿ ನಗುವುದು, ಹಾಸ್ಯ ಚಟಾಕಿ ಹಾರಿಸುವುದು ದೇಶದ ಪ್ರಧಾನಿಯಾಗಿ ಸರಿಯಲ್ಲ – ರಾಹುಲ್ ಗಾಂಧಿ ವಿಷಾದ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಮಣಿಪುರವು ತಿಂಗಳುಗಟ್ಟಲೆ ಹೊತ್ತಿ ಉರಿಯುತ್ತಿರುವಾಗ ಸಂಸತ್ತಿನಲ್ಲಿ ನಗುವುದು ಮತ್ತು ಹಾಸ್ಯ ಚಟಾಕಿ ಹಾರಿಸುವುದು ದೇಶದ ಪ್ರಧಾನಿಗೆ ಸಲ್ಲದು ಎಂದು ಶುಕ್ರವಾರ ಕಿಡಿ ಕಾರಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಲೋಕಸಭೆಯಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ಎರಡು ಗಂಟೆಗಳ ಭಾಷಣದಲ್ಲಿ ಮಣಿಪುರದ ಕುರಿತು ಕೇವಲ ಎರಡು ನಿಮಿಷ ಮಾತನಾಡಿದ್ದಾರೆ ಎಂದು ಟೀಕಿಸಿದರು. “ನಾನು ನಿನ್ನೆ ಎರಡು ಗಂಟೆಗಳ ಕಾಲ ನಗುವುದು, ತಮಾಷೆ ಮಾಡುವುದು, ಘೋಷಣೆ ಕೂಗುತ್ತಾ ಮಾತನಾಡುವುದನ್ನು ನೋಡಿದೆ. ಮಣಿಪುರ ರಾಜ್ಯ ಹಲವು ತಿಂಗಳಿಂದ ಹೊತ್ತಿ ಉರಿಯುತ್ತಿದೆ ಎಂಬುದನ್ನು ಪ್ರಧಾನಿ ಮರೆತಂತಿದೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಸಂಸತ್ತಿನ ಮಧ್ಯದಲ್ಲಿ ಕುಳಿತಿದ್ದ ಪ್ರಧಾನಿ ಮೋದಿ ನಾಚಿಕೆಯಿಲ್ಲದೆ ನಗುತ್ತಿದ್ದರು. ಮಣಿಪುರ ಸಮಸ್ಯೆ ಕಾಂಗ್ರೆಸ್ ಅಥವಾ ನನ್ನದಲ್ಲ. ಅಲ್ಲಿ ಏನು ನಡೆಯುತ್ತಿದೆ ಮತ್ತು ಹಿಂಸಾಚಾರ ಏಕೆ ನಿಲ್ಲಿಸುತ್ತಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು “ಮಣಿಪುರದಲ್ಲಿ ಭಾರತ ಮಾತೆಯನ್ನು ಕೊಂದಿದ್ದಾರೆ” ಎಂಬ ತಮ್ಮ ಹೇಳಿಕೆ ಪೊಳ್ಳು ಮಾತುಗಳಲ್ಲ ಎಂದರು. ಪ್ರಧಾನಿ ಮೋದಿ “ಮಣಿಪುರ ಹೊತ್ತಿ ಉರಿಯಬೇಕು ಎಂದು ಬಯಸುತ್ತಾರೆ ಮತ್ತು ಆ ಬೆಂಕಿಯನ್ನು ನಂದಿಸಬಾರದು” ಎಂಬುದು ಅವರ ಉದ್ದೇಶವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಭಾರತೀಯ ಸೇನೆಯು 2-3 ದಿನಗಳಲ್ಲಿ ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಬಹುದು. ಆದರೆ ಕೇಂದ್ರ ಸರ್ಕಾರ ಅಲ್ಲಿ ಸೇನೆ ನಿಯೋಜಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.