ಮದುವೆಯಲ್ಲಿ ಕೈತಪ್ಪಿ ಅತಿಥಿಗಳ ಮೇಲೆ ಬಿದ್ದ ಮುಸುರೆ ತಟ್ಟೆಗಳು – ವೇಟರ್ನನ್ನು ಕೊಂದು, ಪೊದೆಗೆ ಎಸೆದ ಪಾಪಿಗಳು ಅರೆಸ್ಟ್
ಲಕ್ನೋ: ಮದುವೆ ಮನೆಯಲ್ಲಿ ಕೈತಪ್ಪಿ ಅತಿಥಿಗಳ ಮೇಲೆ ಮುಸುರೆ ತಟ್ಟೆ ಕೆಡವಿದ್ದಕ್ಕೆ ವೇಟರ್ನನ್ನು ಹಿಗ್ಗಾಮುಗ್ಗಾ ಥಳಿಸಿ ಕೊಲೆಗೈದು ಮೃತ ದೇಹವನ್ನು ಪೊದೆಗೆ ಎಸೆದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಮೃತ 26 ವರ್ಷದ ಪಂಕಜ್ ಕುಮಾರ್ ಅವರ ಶವ ನವೆಂಬರ್ 18ರಂದು ಪೊದೆಗಳಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಬ್ಯಾಂಕ್ವೆಟ್ ಹಾಲ್ನ ನಿರ್ವಾಹಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಪಂಕಜ್ ಅಂಕುರ್ ವಿಹಾರ್ ಸಿಜಿಎಸ್ ವಾಟಿಕಾದಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ನವೆಂಬರ್ 17ರಂದು ಮದುವೆ ಸಮಾರಂಭವೊಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದಾಗ ಮುಸುರೆ ತಟ್ಟೆಗಳು ಅತಿಥಿಗಳಾಗಿ ಆಗಮಿಸಿದ್ದ ರಿಷಬ್ ಹಾಗೂ ಆತನ ಇಬ್ಬರು ಸ್ನೇಹಿತರ ಮೇಲೆ ಬಿದ್ದಿತ್ತು. ಇದರಿಂದ ಸಿಟ್ಟಾದ ರಿಷಬ್ ವೈಟರ್ ಪಂಕಜ್ನೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಜಗಳ ಅತಿರೇಕಕ್ಕೆ ತಿರುಗಿ ಹೊಡೆದಾಟ ನಡೆದಿದ್ದು, ಈ ವೇಳೆ ಪಂಕಜ್ನನ್ನು ನೆಲಕ್ಕೆ ಬೀಳಿಸಿ ರಿಷಬ್ ಹೊಡೆದು ಕೊಂದಿದ್ದಾನೆ. ಕೊಲೆ ಬಳಿಕ ಸಿಕ್ಕಿ ಬೀಳುವ ಭಯದಲ್ಲಿ ರಿಷಬ್ ಹಾಗೂ ಆತನ ಸ್ನೇಹಿತರಾದ ಮನೋಜ್ ಹಾಗೂ ಅಮಿತ್ ಪಂಕಜ್ನ ಶವವನ್ನು ಹತ್ತಿರದ ಕಾಡಿಗೆ ಕೊಂಡುಹೋಗಿ ಅಲ್ಲಿ ಬಚ್ಚಿಟ್ಟಿದಾರೆ. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ಬ್ಯಾಂಕ್ವೆಟ್ ಹಾಲ್ನ ನಿರ್ವಾಹಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.