Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮುಸ್ಲಿಂ ಕಮಿಟಿಗೆ ಹಿನ್ನಡೆ: ಜ್ಞಾನವಾಪಿ ಮಸೀದಿಯಲ್ಲಿ ASI ಸಮೀಕ್ಷೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಮೀಕ್ಷೆ ನಡೆಸಲು ಅಹಮದಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ವಿರೋಧಿಸಿ ಅಂಜುಮನ್ ಇಂತೇಜಮಿಯಾ ಮಸೀದಿ ಸಮಿತಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಸಮೀಕ್ಷೆಗೆ ತಡೆ ನೀಡುವ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಹಂತದಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಜ್ಞಾನವಾಪಿ ಮಸೀದಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಸಮೀಕ್ಷೆಯು ಇತಿಹಾಸವನ್ನು ಕೆದಕುತ್ತದೆ. ಇದು ‘ಹಿಂದಿನ ಗಾಯಗಳನ್ನು ಮತ್ತೆ ತೆರೆದಂತಾಗುತ್ತದೆ’ ಎಂದು ಮುಸ್ಲಿಂ ಸಂಘಟನೆ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿತ್ತು. ಮಸೀದಿ ನಿರ್ವಹಣಾ ಸಮಿತಿಯ ಪರವಾಗಿ ಹಾಜರಾದ ಹಿರಿಯ ವಕೀಲ ಹುಝೆಫಾ ಅಹ್ಮದಿ, ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ವಾದಿಸಿದ್ದು, ASI ಕ್ರಮ ‘ಇತಿಹಾಸವನ್ನು ಅಗೆಯುತ್ತಿದೆ’. ಇದು ಪೂಜಾ ಸ್ಥಳಗಳ ಕಾಯ್ದೆಯನ್ನು ಉಲ್ಲಂಘಿಸುತ್ತದೆ. ಇದು ಭ್ರಾತೃತ್ವ ಮತ್ತು ಜಾತ್ಯತೀತತೆಯ ಪ್ರಭಾವ ಬೀರುತ್ತದೆ ಎಂದು ವಾದಿಸಿದ್ದರು. ನೀವು ಒಂದೇ ಒಂದು ಆಧಾರದ ಮೇಲೆ ಪ್ರತಿ ಮಧ್ಯಂತರ ಆದೇಶವನ್ನು ವಿರೋಧಿಸಲು ಸಾಧ್ಯವಿಲ್ಲ. ನಿಮ್ಮ ಆಕ್ಷೇಪಣೆಗಳನ್ನು ವಿಚಾರಣೆಯ ಸಮಯದಲ್ಲಿ ನಿರ್ಧರಿಸಲಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ. ASI ಸಮೀಕ್ಷೆಯು 500 ವರ್ಷಗಳ ಹಿಂದೆ ಏನಾಯಿತು ಎಂಬುದರ ಇತಿಹಾಸಕ್ಕೆ ಹೋಗಲು ಉದ್ದೇಶಿಸಿದೆ. ಇದು ಹಿಂದಿನ ಗಾಯಗಳನ್ನು ಮತ್ತೆ ತೆರೆದಂತಾಗುತ್ತದೆ ಎಂದು ಅಹಮದಿ ಅಲಹಾಬಾದ್ ಹೈಕೋರ್ಟ್ ಆದೇಶದ ಸಮೀಕ್ಷೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಚಾರಣೆ ವೇಳೆ ಸಮೀಕ್ಷೆಯು 1947ರಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳ ಸ್ವರೂಪವನ್ನು ಬದಲಾಯಿಸುವುದನ್ನು ನಿಷೇಧಿಸುವ 1991ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಅಹ್ಮದಿ ಹೇಳಿದರು.