ಮೆಟ್ರೋ ಡೋರ್ ನಲ್ಲಿ ಸೀರೆ ಸಿಲುಕಿ ಮಹಿಳೆ ಸಾವು: ತಬ್ಬಲಿಗಳಾದ ಮಕ್ಕಳು, ಪರಿಹಾರ ಘೋಷಣೆ
ನವದೆಹಲಿ: ದೆಹಲಿ ಮೆಟ್ರೋ ಬಾಗಿಲಿಗೆ ಸಿಲುಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಮಹಿಳೆಯ ಮಕ್ಕಳ ಭವಿಷ್ಯಕ್ಕಾಗಿ ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್ ಸಿ) 15 ಲಕ್ಷ ರೂ. ಪರಿಹಾರವನ್ನು ಘೋಷಣೆ ಮಾಡಿದೆ.
ಈ ದುರ್ಘಟನೆ ಡಿ. 14ರಂದು ದೆಹಲಿಯ ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ನಡೆದಿದ್ದು, ಘಟನೆಯಲ್ಲಿ ರೀನಾ (35) ಎಂಬುವವರು ಮೃತಪಟ್ಟಿದ್ದರು. ಇದೀಗ ರೀನಾ ಅವರ ಮಕ್ಕಳ ಭವಿಷ್ಯಕ್ಕಾಗಿ ಡಿಎಂಆರ್ ಸಿ ಪರಿಹಾರ ಘೋಷಿಸುವುದರ ಜೊತೆಗೆ ಮಕ್ಕಳ ಶೈಕ್ಷಣಿಕ ವೆಚ್ಚವನ್ನೂ ಕೂಡ ಭರಿಸುವುದಾಗಿ ಭರವಸೆ ನೀಡಿದೆ.
ರೀನಾ ಅವರು ಇಳಿಯುವಷ್ಟರದಲ್ಲಿ ಮೆಟ್ರೋ ಬಾಗಿಲು ಹಾಕಿದ್ದು, ಆಕೆಯ ಸೀರೆ ಜಾಕೆಟ್ ಬಾಗಿಲಿಗೆ ಸಿಕ್ಕಿಹಾಕಿಕೊಂಡಿದೆ. ಪರಿಣಾಮ ಪ್ಲಾಟ್ ಫಾರ್ಮ್ ಮೇಲೆ ಬಿದ್ದ ರೀನಾ ಅವರನ್ನು ಮೆಟ್ರೋ ಸಾಕಷ್ಟು ದೂರ ಎಳೆದೊಯ್ದಿದ್ದಿತ್ತು. ಇದರಿಂದ ಗಂಭೀರ ಗಾಯಗೊಂಡ ಅವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಡಿ.16 ರಂದು ಕೊನೆಯುಸಿರೆಳೆದಿದ್ದರು.
ಇನ್ನು ರೀನಾ ಅವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಳಿಕ ತಮ್ಮ 12 ವರ್ಷದ ಮಗಳು ಹಾಗೂ 10 ವರ್ಷದ ಮಗನೊಂದಿಗೆ ಜೀವನ ಸಾಗಿಸುತ್ತಿದ್ದರು. ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳೀಗ ತಾಯಿಯನ್ನೂ ಕಳೆದುಕೊಂಡು ತಬ್ಬಲಿಗಳಾಗಿದ್ದು, ಅವರ ಸಂಬಂಧಿಕರು ಮಕ್ಕಳನ್ನು ನೋಡಿಕೊಳ್ಳಲು ಮುಂದೆ ಬರುತ್ತಿಲ್ಲ. ಈ ಕಾರಣದಿಂದಲೇ ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಮೆಟ್ರೋ ಪೂರಕ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದೆಹಲಿ ಸಾರಿಗೆ ಮಂತ್ರಿ ಗೆಹಲೋಟ್ ತಿಳಿಸಿದ್ದಾರೆ.