Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೊದಲು ರಾಹುಲ್ ಗಾಂಧಿ ವಿರುದ್ಧ ದೂರು ಕೊಟ್ರು: ಕೊನೆಗೆ ನಾವು ‘ಫ್ಲೈಯಿಂಗ್‌ ಕಿಸ್‌’ ಕೊಟ್ಟದ್ದನ್ನು ನೋಡಿಯೇ ಇಲ್ಲ ಎಂದ ಬಿಜೆಪಿ ಸಂಸದೆ

ಸಂಸದ ರಾಹುಲ್‌ ಗಾಂಧಿ ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಸಂಸತ್ತಿನಲ್ಲಿ ಫ್ಲೈಯಿಂಗ್‌ ಕಿಸ್‌ ನೀಡಿ ಅನುಚಿತವಾಗಿ ವರ್ತಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸದೆಯರು ಸ್ಪೀಕರ್‌ಗೆ ಮನವಿ ಪತ್ರ ನೀಡಿದ ಬೆನ್ನಲ್ಲೇ, ರಾಹುಲ್ ಗಾಂಧಿ ಸಂಸತ್ತಿನಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟಿರುವುದನ್ನು ನಾನು ನೋಡಿಲ್ಲ ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ಹೇಳಿದ್ದಾರೆ.
‌ಶೋಭಾ ಕರಂದ್ಲಾಜೆ ಅವರು ಸ್ಪೀಕರ್‌ಗೆ ರಾಹುಲ್‌ ಗಾಂಧಿ ವಿರುದ್ಧ ಸಲ್ಲಿಸಿರುವ ಪತ್ರದಲ್ಲಿ ಸಂಸದೆ ಹೇಮಾಮಾಲಿನಿ ಅವರ ಸಹಿಯೂ ಇದೆ. ಅಲ್ಲದೇ, ಸ್ಪೀಕರ್ ರನ್ನು ಭೇಟಿ ಮಾಡಿದ ನಿಯೋಗದಲ್ಲಿ ಹೇಮಾ ಮಾಲಿನಿ ಕೂಡ ಇದ್ದರು.
ಇದೀಗ ರಾಹುಲ್‌ ವಿರುದ್ಧ ದೂರು ನೀಡಿದವರಲ್ಲಿ ಒಬ್ಬರಾದ ಹೇಮಾ ಮಾಲಿನಿ ಅವರೇ ರಾಹುಲ್‌ ಫ್ಲೈಯಿಂಗ್‌ ಕಿಸ್‌ ಮಾಡುವುದನ್ನು ತಾನು ನೋಡಿಲ್ಲ ಎಂದು ಹೇಳಿರುವುದು ರಾಹುಲ್‌ ವಿರುದ್ಧ ಮಾಡಿರುವ ಆರೋಪದ ಸತ್ಯಾಸತ್ಯತೆ ಬಗ್ಗೆ ಚರ್ಚೆ ಹುಟ್ಟುವಂತೆ ಮಾಡಿದೆ.
ರಾಹುಲ್‌ ಗಾಂಧಿ ಅವರು ಮಣಿಪುರದ ವಿಚಾರದಲ್ಲಿ ಮಾಡಿರುವ ಭಾಷಣದಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಮಾಡಿದ ಕುತಂತ್ರ ಇದು ಎಂದು ಹಲವರು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಭಾಷಣದ ನಂತರ ಕೇಂದ್ರ ಸಚಿವೆ ಸ್ಮೃತಿ ಪ್ರತಿಕ್ರಿಯೆ ನೀಡಲು ಮುಂದಾದಾಗ, ರಾಹುಲ್ ಗಾಂಧಿ ಹೊರನಡೆದಿದ್ದು, ಆ ವೇಳೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಸ್ಮೃತಿ ಇರಾನಿ ಆರೋಪಿಸಿದ್ದಾರೆ. ‘ನನಗಿಂತ ಮೊದಲು ಮಾತನಾಡಿದ ವ್ಯಕ್ತಿ ಅನುಚಿತವಾಗಿ ವರ್ತಿಸಿದ್ದಾರೆ. ಸ್ತ್ರೀ ದ್ವೇಷಿಯಾಗಿರುವ ಪುರುಷ ಮಾತ್ರ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಬಹುದು. ಇಂತಹ ಅಮಾನವೀಯ ನಡವಳಿಕೆಯನ್ನು ಸಂಸತ್ತಿನಲ್ಲಿ ಹಿಂದೆಂದೂ ಕಂಡಿರಲಿಲ್ಲ’ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.