ಮೊಬೈಲ್ನಲ್ಲಿ ಹೆಚ್ಚು ರೀಲ್ಸ್ ನೋಡೋ ಅಭ್ಯಾಸವಿದೆಯಾ ? ಹಾಗಾದ್ರೆ ನಿಮ್ಮ ಕಣ್ಣನ್ನೂ ಕಾಡಬಹುದು ಮೆಳ್ಳೆಗಣ್ಣಿನ ಸಮಸ್ಯೆ
ಇತ್ತೀಚಿಗೆ ಜನಜನಿತವಾಗಿರೋ ರೀಲ್ಸ್ ಅತಿಯಾಗಿ ನೋಡೋದ್ರರಿಂದ ಐ ಪ್ರಾಬ್ಲಂ ಫಿಕ್ಸ್ ಅಂತಿವೆ ಅಧ್ಯಯನಗಳು. ಈಗ ನೋಡಿದ್ದು, ಮಾಡಿದ್ದು,ಸಿಕ್ಕಿದ್ದು ಎಲ್ಲವೂ ರೀಲ್ಸ್ (instagram Reels) ರೂಪದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡೋ ಕಾಲ. ಹೀಗಾಗಿ ಸಾವಿಲ್ಲದ ಮನೆ ಸಾಸಿವೆ ತರಬಹುದು, ಮೊಬೈಲ್ ರೀಲ್ಸ್ ನೋಡದ ಮನೆಯಿಂದ ನೀರು ತರೋದು ಸಾಧ್ಯವಿಲ್ಲ. ಹೀಗೆ ರೀಲ್ಸ್ ಪುಟ್ಟ ಮಗುವಿನಿಂದ ಆರಂಭಿಸಿ ಇನ್ನೇನು ಕಾಡು ಬಾ ಅಂತಿರೋ ಮುದುಕರವರೆಗೂ ಎಲ್ಲರೂ ರೀಲ್ಸ್ ಪ್ರಿಯರು.
ಆದರೆ ಈಗ ವೈದ್ಯಕೀಯ ಸಂಶೋಧನೆಗಳು ಆಘಾತಕಾರಿ ಹಾಗೂ ಆತಂಕಕಾರಿ ಸಂಗತಿಯೊಂದನ್ನು ಹೊರಹಾಕಿವೆ. ನೀವುಸಿಕ್ಕಾಪಟ್ಟೆ ರೀಲ್ಸ್ ನೋಡ್ತಿರಾ? ಪದೇ ಪದೇ Instagram ನೋಡೊ ಹುಚ್ಚಿದೆಯಾ? ಹಾಗಿದ್ರೆ ನಿಮ್ಮ ಕಣ್ಣುಗಳ ಬಗ್ಗೆ ಕೇರ್ ಫುಲ್ ಆಗಿರಿ. ಸಿಕ್ಕಾಪಟ್ಟೆ ರೀಲ್ಸ್, ನೋಡುವವರಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗ್ತಿದೆಯಂತೆ.
ಅದರಲ್ಲೂ ಮೆಳ್ಳೆಗಣ್ಣು ಸಮಸ್ಯೆ ಹೆಚ್ಚಾಗಿ ಕಾಡ್ತಿದೆಯಂತೆ. ಅದರಲ್ಲೂ ಮೂರು ಹೊತ್ತು ಎಲೆಕ್ಟ್ರಿಕಲ್ ಗ್ಯಾಜೆಟ್ ಗಳಲ್ಲಿ ಕೆಲಸ ಮಾಡೋ ಟೆಕ್ಕಿಗಳಲ್ಲಿ ಈ ಸಮಸ್ಯೆ ಹೆಚ್ಚಾಗ್ತಿದೆ. ಸ್ಕ್ವಿಂಟ್ ಐ ಪ್ರಾಬ್ಲಂ ಎಂದು ಕರೆಯಿಸಿಕೊಳ್ಳೋ ಈ ಸಮಸ್ಯೆ ಸಿಕ್ಕಾಪಟ್ಟೆ ಮೊಬೈಲ್ ನೋಡ್ತಿದ್ದ 6 ವರ್ಷದ ಮಗುವಿನಲ್ಲೂ ಕಾಣಿಸಿಕೊಂಡಿದೆ. ಈ ಆತಂಕಕಾರಿ ವಿಚಾರವನ್ನು ರಾಜಧಾನಿ ತಜ್ಞ ನೇತ್ರ ವೈದ್ಯರು ಖಚಿತಪಡಿಸ್ತಿದ್ದಾರೆ.
ಮೊಬೈಲ್ ಅನ್ನು ಗಂಟೆಗಟ್ಟಲೆ ನೋಡೋದ್ರಿಂದ ಮೆಲ್ಲಗಣ್ಣು ಬರ್ತಿದೆ. ಹತ್ತಿರದ ವಸ್ತುವನ್ನು ನೋಡಿದಾಗ ಕಣ್ಣಿನ ವಿಷನ್ ಹತ್ತಿರ ಕೂಡುತ್ತೆ. ಇದು ಅತಿಯಾದಾಗ ಸ್ಕ್ವಿಂಟ್ ಐ ಆಗುತ್ತೆ. ಡಬ್ಬಲ್ ಡಬ್ಬಲ್ ಕಾಣೋದು ಸ್ಕ್ವಿಂಟ್ ಐ ಗುಣಲಕ್ಷಣ. ಮಕ್ಕಳು ಹಾಗೂ ದೊಡ್ಡವರು ರೀಲ್ಸ್ ನೋಡುತ್ತಾ ಗಂಟೆಗಟ್ಟಲೇ ಮೊಬೈಲ್ ನಲ್ಲೇ ಕಳೆಯುತ್ತಾರೆ.
ಇದರಿಂದ ಅವರ ದೃಷ್ಟಿ ಗಂಟೆಗಳ ಕಾಲ ಸ್ಕ್ರಿನ್ ಮೇಲೆ ಕೇಂದ್ರಿಕೃತಗೊಳ್ಳುತ್ತದೆ. ಇದೇ ಕಣ್ಣಿನ ಸಮಸ್ಯೆಗೆ ಮೂಲ ಕಾರಣ. ಇನ್ನು ಮಕ್ಕಳಿಗೆ ಇದು ಬಂದಾಗ ತಿಳಿಯಲು ಸಮಯ ಹಿಡಿಯುತ್ತೆ. ರೈಟ್ ಟೈಮ್ ಗೆ ಪರೀಕ್ಷಿಸದೇ ಇದ್ದರೆ ಶಾಶ್ವತ ಕಣ್ಣಿನ ಸಮಸ್ಯೆ ಎದುರಾಗುತ್ತದೆ ಎಂದು ಬೆಂಗಳೂರಿನ ಮಿಂಟೋ ಆಸ್ಪತ್ರೆಯ ವೈದ್ಯ ಡಾ.ನವೀನ್ ಹೇಳ್ತಾರೆ.
ಈ ಸಮಸ್ಯೆ ಕಾಣಿಸಿಕೊಂಡ ಆರಂಭದಲ್ಲಿ ಗೊತ್ತಾದರೇ ಕಣ್ಣಿನ ವ್ಯಾಯಾಮಗಳ ಮೂಲಕ ಇದನ್ನು ಸರಿಪಡಿಸಬಹುದು. ಆದರೆ ಪ್ರಾರಂಭಿಕ ಹಂತ ದಾಟಿದ ಮೇಲಾದರೇ ಇದಕ್ಕೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತೆ ಅಂತಾರೆ ವೈದ್ಯರು. ಈಗಾಗಲೇ ಬೆಂಗಳೂರು ಸೇರಿದಂತೆ ಎಲ್ಲಾ ಕಡೆಗಳಲ್ಲೂ ಮಕ್ಕಳ ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದೆ. ಕೇವಲ ಕಣ್ಣಿನ ದೋಷ ಮಾತ್ರವಲ್ಲ ಮಕ್ಕಳಲ್ಲಿ ಮಾನಸಿಕ ತೊಂದರೆಯು ಕಾಣಿಸಿಕೊಳ್ಳುತ್ತದೆ.ಅತಿಯಾದ ಬೇಸರ, ಅಳು, ಖಿನ್ನತೆ, ಕ್ರೌರ್ಯದಂತಹ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪೋಷಕರು ಆರಂಭದಲ್ಲೇ ಜಾಗೃತಿ ವಹಿಸಿ ಮೊಬೈಲ್ಮತ್ತು ರೀಲ್ಸ್ ವೀಕ್ಷಣೆಗೆ ಕಡಿವಾಣ ಹಾಕೋದು ಉತ್ತಮ. ಇನ್ನೂ ದೊಡ್ಡವರಲ್ಲೂ ಕೂಡ ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿ ಹಾಗೂ ನಿದ್ರಾಹೀನತೆ ಸಮಸ್ಯೆ ಸಾಮಾನ್ಯವಾಗ್ತಿದ್ದು ಹೀಗಾಗಿ ಮೊಬೈಲ್ ಬಳಕೆ ಮೇಲೆ ಸ್ವಯಂ ನಿಯಂತ್ರಣ ಹೇರಿಕೊಳ್ಳುವ ಅಗತ್ಯವಿದೆ.