‘ಮೋದಿ ಅವರನ್ನು ಅಯೋಧ್ಯೆಯಲ್ಲಿ ದೇವಳ ನಿರ್ಮಿಸಲು ಶ್ರೀರಾಮ ಆರಿಸಿದ್ದಾನೆ’- ಎಲ್ .ಕೆ. ಅಡ್ವಾಣಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ರಾಮ ದೇವರ ಅನನ್ಯ ಭಕ್ತರಾಗಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಹೇಳಿದ್ದಾರೆ.
ಹಿಂದಿ ನಿಯತಕಾಲಿಕ ʼರಾಷ್ಟ್ರ ಧರ್ಮʼಕ್ಕೆ ನೀಡಿದ ಸಂದರ್ಶನದಲ್ಲಿ ಅಡ್ವಾಣಿ ಮಾತನಾಡಿ, ತಾನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜನಬೆಂಬಲ ಪಡೆಯಲು ಸೆಪ್ಟೆಂಬರ್ 25, 1990 ರಂದು ಆರಂಭಗೊಂಡ “ರಾಮ ರಥ ಯಾತ್ರೆಯ ಸಾರಥಿ ಮಾತ್ರ” ಎಂದರು.ತಾವು 33 ವರ್ಷಗಳ ಹಿಂದೆ ನಡೆಸಿದ ರಾಮ ರಥ ಯಾತ್ರೆಯು ತಮ್ಮ ರಾಜಕೀಯ ಪಯಣದ ಅತ್ಯಂತ ನಿರ್ಣಾಯಕ ಮತ್ತು ಪರಿವರ್ತನೆತಂದ ಯಾತ್ರೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಇಂದು ರಥ ಯಾತ್ರೆಗೆ 33 ವರ್ಷ ಪೂರ್ಣಗೊಂಡಿದೆ. ಸೆಪ್ಟೆಂಬರ್ 25, 1990 ರಂದು ಬೆಳಿಗ್ಗೆ ಈ ಯಾತ್ರೆ ಆರಂಭಿಸಿದ್ದೆವು. ನಾವು ಶ್ರೀರಾಮನ ಮೇಲೆ ನಂಬಿಕೆಯಿರಿಸಿ ನಡೆಸಿದ ಯಾತ್ರೆಯು ದೇಶದಲ್ಲಿ ಆಂದೋಲನದ ರೂಪ ಪಡೆಯುವುದು ಎಂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದರು.
ಆಗ ತಮ್ಮ ಸಹಾಯಕರಾಗಿದ್ದ ಮೋದಿ, ರಥ ಯಾತ್ರೆ ಸಂದರ್ಭ ಹೆಚ್ಚು ಖ್ಯಾತಿ ಪಡೆದಿರಲಿಲ್ಲ ಎಂದು ಅಡ್ವಾಣಿ ಹೇಳಿದ್ದಾರೆ. ರಥ ಯಾತ್ರೆಯುದ್ದಕ್ಕೂ ಮೋದಿ ಅವರು ಅಡ್ವಾಣಿ ಜೊತೆಗಿದ್ದರು. ಆ ಕ್ಷಣದಲ್ಲಿಯೇ ಶ್ರಿ ರಾಮನು ತನ್ನ ಪರಮ ಭಕ್ತ ಮೋದಿ ಅವರನ್ನು ಅಯೋಧ್ಯೆಯಲ್ಲಿ ಈ ದೇವಳ ನಿರ್ಮಿಸಲು ಆರಿಸಿದ್ದ, ಎಂದು ಅಡ್ವಾಣಿ ಹೇಳಿದ್ದಾರೆ.