ಮೋದಿ ಜೊತೆಗಿನ ಸೆಲ್ಫಿ ತೆಗೆದು Melodi ಎಂದು ಪೋಸ್ಟ್ ಮಾಡಿದ ಇಟಲಿ ಪ್ರಧಾನಿ ಮೆಲೋನಿ
ದುಬೈ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿನ ಸೆಲ್ಫಿಗೆ Melodi ಎಂದು ಶೀರ್ಷಿಕೆ ನೀಡಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ದುಬೈನಲ್ಲಿ ನಡೆಯುತ್ತಿದೆ. ಈ ಸಮ್ಮೇಳನದಲ್ಲಿ ವಿಶ್ವದ ಅನೇಕ ನಾಯಕರು ಪಾಲ್ಗೊಂಡಿದ್ದರು. ಈ ಸಂದರ್ಭ ಪ್ರಧಾನಿ ಮೋದಿ ಹಾಗೂ ಇಟಲಿ ಪ್ರಧಾನಿ ಮೆಲೋನಿ ಅವರು ಭೇಟಿಯಾಗಿದ್ದು, ಮೆಲೊನಿ ಅವರು ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಜೊತೆಗೆ ಗುಡ್ ಫ್ರೆಂಡ್ಸ್ ಎಟ್ COP28 #Melodi ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮೆಲೋನಿಯವರನ್ನು ಭೇಟಿಯಾದ ಮೋದಿ ಅವರು ಕೂಡ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರಿಬ್ಬರು ಇರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಅಗಿದೆ. ಜೊತೆಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಭೇಟಿಯಾಗಿ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತ ಮತ್ತು ಇಟಲಿ ನಡುವಿನ ಸಹಯೋಗದ ಪ್ರಯತ್ನಗಳನ್ನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಬರೆದುಕೊಂಡಿದ್ದಾರೆ.
ಈ ಹಿಂದೆ ನಡೆದ ಜಿ20 ಸಮ್ಮೇಳನದ ಬಳಿಕ Melodi ಹ್ಯಾಶ್ ಟ್ಯಾಗ್ ಬಹಳ ಫೇಮಸ್ ಆಗಿತ್ತು. ಮೆಲೋನಿ ಹಾಗೂ ಮೋದಿ ಅವರ ಅಭಿಮಾನಿಗಳು ಇವರಿಬ್ಬರ ಹೆಸರು ಸೇರಿಸಿ Melodi ಟ್ಯಾಗ್ ಬಳಸಿ ಪೋಸ್ಟ್ ಮಾಡುತ್ತಿದ್ದರು. ಆದರೆ ಇದೀಗ ಸ್ವತಃ ಮೆಲೋನಿ ಅವರೇ ಈ ಹ್ಯಾಶ್ ಟ್ಯಾಗ್ ಬಳಸಿ ಮೋದಿ ಜೊತೆಗಿನ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ.