Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮ್ಯಾರಥಾನ್‌ನಲ್ಲಿ ಭಾಗಿಯಾದ 20 ವರ್ಷದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

ಚೆನ್ನೈ: 20 ವರ್ಷದ ವಿದ್ಯಾರ್ಥಿಯೊಬ್ಬ ಮ್ಯಾರಥಾನ್‌ನಲ್ಲಿ ಓಡಿದ ನಂತರ ಹೃದಯಾಘಾತದಿಂದ ಸಾವನ್ನಪ್ಪಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿ ಕಲ್ಲಕುರಿಚಿಯ ದಿನೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದು, ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತ ಭಾನುವಾರ ಮುಂಜಾನೆ ನಡೆದ ಉತಿರಂ 2023 ರಕ್ತದಾನ ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ. ಬಳಿಕ ವಿದ್ಯಾರ್ಥಿ 1 ಗಂಟೆಗಳ ಕಾಲ ಆರೋಗ್ಯವಾಗಿಯೇ ಇದ್ದ ಹಾಗೆ ಕಾಣಿಸುತ್ತಿದ್ದ ಎಂದು ಆತನ ಸಹಪಾಠಿಗಳು ತಿಳಿಸಿದ್ದಾರೆ. ಬಳಿಕ ಆತ ಮೂರ್ಛೆ ಹೋಗಿದ್ದು, ತಕ್ಷಣ ಆತನನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸ್ನೇಹಿತರು ಸಾಗಿಸಿದ್ದಾರೆ.

ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿಯನ್ನು 8:45ರ ಸುಮಾರಿಗೆ ತುರ್ತು ವಿಭಾಗಕ್ಕೆ ದಾಖಲಿಸಿದ್ದಾರೆ. ಬಳಿಕ ಬೆಳಗ್ಗೆ 10:10ರ ಸುಮಾರಿಗೆ ಆತ ಹೃದಯ ಸ್ಥಂಭನಕ್ಕೆ ಒಳಗಾಗಿದ್ದಾನೆ. ಆತನನ್ನು ವೈದ್ಯರು ಬದುಕಿಸಲು ಪ್ರಯತ್ನಿಸಿದರೂ ಬೆಳಗ್ಗೆ 10:45ಕ್ಕೆ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.