ಯತ್ನಾಳ್ ರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದು ಯಡಿಯೂರಪ್ಪ : ರೇಣುಕಾಚಾರ್ಯ ಆಕ್ರೋಶ
ದಾವಣಗೆರೆ: ಜೆಡಿಎಸ್ ಪಕ್ಷಕ್ಕೆ ಹೋದ ಬಿಜೆಪಿ ಹಿರಿಯ ಶಾಸಕರಾಗಿರುವ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಗೆ ಕರೆತಂದು ಈ ಹಿಂದೆ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದು ಯಡಿಯೂರಪ್ಪ. ಆದರೆ ಈ ವಿಚಾರವಾಗಿ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮತನಾಡಿದ ಅವರು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ಮತ್ತು ಬಿಎಸ್ವೈ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಲವು ಆರೋಪಗಳನ್ನ ಮಾಡ್ತಿದ್ದಾರೆ. ಬಿಜೆಪಿ ಪಕ್ಷದಲ್ಲೇ ಇದ್ದು ತಮ್ಮದೇ ಸಮುದಾಯಕ್ಕೆ ಸೇರಿದ ನಾಯಕನ ಬಗ್ಗೆ ಆರೋಪ ಹೊರಿಸುವುದು ಎಷ್ಟು ಸರಿ ಎಂದರು.
ಇನ್ನು ಯತ್ನಾಳ್ ಅವರ ಬಾಯಿ ಸುಮ್ಮನಿರಲ್ಲ, ಮುಂದೇ ಏನೇನೋ ಮಾತಾಡುತ್ತಾರೆ ಅಂತ ಕೆಲವರು ಹಿಂದೆಯೇ ನಮಗೆ ಎಚ್ಚರಿಕೆಯ ಮಾತುಗಳನ್ನ ಹೇಳಿದ್ದರು.
ಆದರೂ ಬಹುತೇಕರ ವಿರೋಧದ ಮಧ್ಯೆ ಯತ್ನಾಳ್ ಅವರನ್ನು ಯಡಿಯೂರಪ್ಪ ಬಿಜೆಪಿ ಪಕ್ಷಕ್ಕೆ ಕರೆ ತಂದಿದ್ದರು. ಇದಾದ ಬಳಿಕ ಮಂತ್ರಿ ಮಾಡಿಲ್ಲ, ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ ಅನ್ನೋ ಕಾರಣಕ್ಕೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎಂದರು.