ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರ್ಪಡೆಯಾದ ಚಂದ್ರಯಾನ-3
ನವದೆಹಲಿ: ಭಾರತದ ಮೂರನೇ ಚಂದ್ರಯಾನ ಯಾತ್ರೆ ಚಂದ್ರಯಾನ-3 ಇಂದು (ಶನಿವಾರ) ತನ್ನ ಪ್ರಯಾಣದಲ್ಲಿ ನಿರ್ಣಾಯಕ ಹಂತವನ್ನು ಇಂದು ತಲುಪಲಿದೆ. ಹೌದು. ಚಂದ್ರಯಾನ- 3 ನೌಕೆಯು ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಯಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ಟ್ವೀಟ್ ಮೂಲಕ ತಿಳಿಸಿದೆ. ಭೂಮಿಯಿಂದ ಉಡಾವಣೆಯಾದ ಚಂದ್ರಯಾನ ನೌಕೆಯು, ಈಗ ತನ್ನ ಉದ್ದೇಶಿದ ಗುರಿಯಾದ ಚಂದ್ರನ ಕಕ್ಷೆಯನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಪ್ರವೇಶಿಸುವ ಮೂಲಕ ಮತ್ತೊಂದು ಹಂತವನ್ನು ಸಫಲವಾಗಿ ಪೂರ್ಣಗೊಳಿಸಿದಂತಾಗಿದೆ. ಇದು ಇಸ್ರೋದ ಯೋಜನೆಯ ಮತ್ತೊಂದು ಯಶಸ್ಸಾಗಿದೆ. ಮುಂದಿನ ಕಾರ್ಯಾಚರಣೆಯಾದ ಕಕ್ಷೆಯ ಸಂಕೋಚನ ಪ್ರಕ್ರಿಯೆಯನ್ನು ಆಗಸ್ಟ್ 6ರ ಭಾನುವಾರ ರಾತ್ರಿ 11 ಗಂಟೆ ಹಾಗೆ ನಿಗದಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ. ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾದ ಚಂದ್ರಯಾನ-3, ಭಾರತದ ಮೂರನೇ ಚಂದ್ರನ ಅನ್ವೇಷಣೆಯಾಗಿದೆ. ಈ ಮಿಷನ್ ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್ ಮಾಡುವ ಗುರಿಯನ್ನು ಹೊಂದಿದೆ. ಇದು ಎಂಟು ಪೇಲೋಡ್‌ಗಳ ಸೆಟ್ ಅನ್ನು ಹೊಂದಿದೆ. ಈ ಎಲ್ಲಾ ಉಪಕರಣಗಳು ಚಂದ್ರನ ಮೇಲ್ಮೈಯಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಲಿವೆ. ಚಂದ್ರ ಮೇಲ್ಮೈಯ ಉಷ್ಣ-ಭೌತಿಕ ನಡವಳಿಕೆಯನ್ನು ಅಧ್ಯಯನ ಮಾಡುವುದು ಮತ್ತು ಮಣ್ಣಿನ ಸಂಪನ್ಮೂಲವನ್ನು ಸಹ ಪರಿಶೀಲಿಸಲಿದೆ. ಚಂದ್ರಯಾನ-3 ಹೊತ್ತೊಯ್ದ ಉಪಕರಣಗಳ ಮೂಲಕ ಮೇಲ್ಮೈಯಲ್ಲಿ ಚಂದ್ರನ ಭೂಕಂಪಗಳನ್ನು ಪತ್ತೆಹಚ್ಚಲು ಮತ್ತು ಅಧ್ಯಯನ ಮಾಡುವ ಗುರಿಯನ್ನು ಈ ಮಿಷನ್ ಹೊಂದಿದೆ.