‘ಯಾರೇನೆ ಪ್ರಯತ್ನ ಮಾಡಿದರೂ ನಾನು ಬಿಜೆಪಿಗೆ ವಾಪಾಸ್ಸಾಗಲ್ಲ’- ಶೆಟ್ಟರ್ ಸ್ಪಷ್ಟನೆ
ಹುಬ್ಬಳ್ಳಿ: ಯಾರೇನೆ ಪ್ರಯತ್ನ ಮಾಡಿದರೂ ನಾನು ಬಿಜೆಪಿಗೆ ವಾಪಾಸ್ಸಾಗಲ್ಲ. ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಮತ್ತೆ ಮರಳುವುದಿಲ್ಲ. ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯಿಂದ ವಿಧಾನಸಭೆ ಚುನಾವಣೆಯ ಟಿಕೆಟ್ ಸಿಗದ ಕಾರಣಕ್ಕಾಗಿ ಜಗದೀಶ್ ಶೆಟ್ಟರ್ ಅವರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದು, ಇದೀಗ ಲೋಕಸಭೆ ಚುನಾವಣೆ ಹಿನ್ನೆಲೆ ಮತ್ತೆ ಬಿಜೆಪಿಗೆ ವಾಪಾಸ್ಸಾಗುತ್ತಾರೆ ಎಂಬ ವದಂತಿಯ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮತ್ತೆ ಬಿಜೆಪಿಗೆ ಕರೆಸಿಕೊಳ್ಳಬೇಕೆಂಬುದು ಹಲವು ನಾಯಕರ ಒತ್ತಾಸೆಯಾಗಿದೆ. ನನಗೆ ಆಗಿರುವ ಅವಮಾನವನ್ನು ನಾನಿನ್ನೂ ಮರೆತಿಲ್ಲ. ನಾನು ಬಿಜೆಪಿ ತೊರೆದ ಬಳಿಕ ಆಗಿರುವ ಹಾನಿ ಅವರ ಅರಿವಿಗೆ ಬಂದಿದೆ. ಆದ್ದರಿಂದ ಕೆಲವರು ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂಬ ಪ್ರಯತ್ನದಲ್ಲಿದ್ದಾರೆ. ಆದರೆ ಹಲವಾರು ನಾಯಕರು ವಾಪಸ್ ತರುವಂತೆ ಒತ್ತಡ ಹೇರುತ್ತಿರುವ ಮಾಹಿತಿ ಇದೆ ಎಂದು ಹೇಳಿದರು.
ಇನ್ನು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವ ಚರ್ಚೆಯ ವಿಚಾರವಾಗಿ ಮಾತನಾಡಿದ ಅವರು, ನಾನು ಯಾವತ್ತೂ ಆಪರೇಷನ್ ಮಾಡಿಲ್ಲ. ಯಾವ ಬಿಜೆಪಿ ನಾಯಕರನ್ನು ಕಾಂಗ್ರೆಸ್ ಗೆ ಕರೆತರುವ ಕೆಲಸ ಮಾಡಿಲ್ಲ. ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೇನೆ ಎಂದರೆ ಸ್ವಾಗತಿಸುತ್ತೇನೆ. ಆ ರೀತಿ ಬಂದವರನ್ನು ಸಿಎಂ, ಡಿಸಿಎಂಗೆ ಭೇಟಿ ಮಾಡಿಸಿದ್ದೇನೆ ಎಂದರು.