ಯೂಟ್ಯೂಬ್ ಚಾನೆಲ್, ಸೋಶಿಯಲ್ ಮೀಡಿಯಾ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಸ್ಥಾಪನೆಗೆ ಸಹಾಯ ಧನಕ್ಕೆ ಅರ್ಜಿ ಆಹ್ವಾನ.!
ಚಿತ್ರದುರ್ಗ : 2023-24ನೇ ಸಾಲಿಗೆ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ನಿರುದ್ಯೋಗಿಗಳಾಗಿರುವ ಪರಿಶಿಷ್ಟ ಪಂಗಡದ ಯುವಕ ಯುವತಿಯರು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್ ಹಾಗೂ ಡಿಜಿಟಲ್ ಮಾಧ್ಯಮ ಉದ್ದಿಮೆ ಸ್ಥಾಪಿಸಲು ಗರಿಷ್ಠ 5 ಲಕ್ಷ ಸಹಾಯಧನವನ್ನು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ನೀಡಲಾಗುವುದು.
ಯೂಟ್ಯೂಬ್ ಚಾನೆಲ್, ಸೋಶಿಯಲ್ ಮೀಡಿಯಾ ನ್ಯೂಸ್ ಪೇಜಸ್, ನ್ಯೂಸ್ ಆನ್ ಲೈನ್ ಬ್ಲಾಗ್, ನ್ಯೂಸ್ ಕಂಟೆಂಟ್ ಕ್ರಿಯೇಷನ್, ವೆಬ್ ಪೇಜಸ್, ಆನ್ ಲೈನ್ ಜರ್ನಲಿಸಂ, ಮೀಡಿಯಾ ರಿಲೇಟೆಡ್ ಟ್ರೈನಿಂಗ್ ಸಂಸ್ಥೆಗಳನ್ನು ಸಹಾಯಧನ ಪಡೆದು ಸ್ಥಾಪಿಸಬಹುದಾಗಿದೆ. ಘಟಕ ವೆಚ್ಚದ ಶೇಕಡ 70 ರಷ್ಟು ಅಥವಾ ಗರಿಷ್ಠ 5 ಲಕ್ಷ ಸಹಾಯಧನವನ್ನು ನಿಗಮದಿಂದ ನೀಡಲಾಗುವುದು.
15 ವರ್ಷಗಳಿಂದ ಕರ್ನಾಟಕದಲ್ಲಿ ನೆಲಸಿರುವ, ಕುಟುಂಬದ ವಾರ್ಷಿಕ ಆದಾಯ ರೂ.1.50 ಲಕ್ಷ ಹೊಂದಿರುವ ಗ್ರಾಮೀಣ ಪ್ರದೇಶ ಹಾಗೂ ರೂ.2 ಲಕ್ಷ ಹೊಂದಿರುವ ನಗರ ಪ್ರದೇಶದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ವಯೋಮಿತಿ 21 ರಿಂದ 50 ವರ್ಷಗಳ ಒಳಗಿರಬೇಕು. ಅರ್ಜಿದಾರರ ಕುಟುಂಬದ ಸದಸ್ಯರು ಸರ್ಕಾರಿ ಅಥವಾ ಅರೆ ಸರ್ಕಾರಿ ನೌಕರರಾಗಿರಬಾರದು. ಸಫಾಯಿ ಕರ್ಮಚಾರಿ, ಅಲೆಮಾರಿ, ಅರೆ-ಅಲೆಮಾರಿ ಜನಾಂಗದವರ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರು ಹಾಗೂ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಆರ್ಥಿಕ ಸೌಲಭ್ಯ ಪಡೆದಿರಬಾರದು. ಅಭ್ಯರ್ಥಿ ಕಡ್ಡಾಯವಾಗಿ UAM(ಉದ್ಯೋಗ ಆಧಾರ್ ಮೆಮೊರಂಡಮ್) ನಲ್ಲಿ ನೊಂದಾಯಿತವಾಗಿರಬೇಕು.
ಆಸಕ್ತರು ಯೋಜನಾ ವರದಿಯೊಂದಿಗೆ ಬ್ಯಾಂಕ್ ಮೂಲಕ ನಿಗಮಕ್ಕೆ ಅರ್ಜಿಸಲ್ಲಿಸಬೇಕು. ಬ್ಯಾಂಕ್‌ನಿಂದ ಘಟಕ ಸ್ಥಾಪನೆ ಹಣ ಸಹಾಯ ನೀಡಿ, ಸಹಾಯಧನ ಒದಗಿಸಲು ಬೇಡಿಕೆ ಬಂದ ಕೂಡಲೇ ಸಹಾಯಧನ ಮಂಜೂರು ಮಾಡಲಾಗುವುದು. ಗರಿಷ್ಠಕ್ಕಿಂತ ಹೆಚ್ಚಿನ ಮೊತ್ತವು ಬ್ಯಾಂಕ್‌ನಲ್ಲಿ ಸಾಲವಾಗಿರುತ್ತದೆ.
ಪಲಾಪೇಕ್ಷಿಯು ನಿಗಮದ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಲ್ಲಿ ನಿಯಮಾನುಸಾರ ಆಯ್ಕೆಯಾಗಿ ಸಾಲ ಪಡೆಯಲು ಅರ್ಹರಾಗಿರಬೇಕು. ಸಹಾಯಧನ ಪಡೆದವರು ಕಡ್ಡಾಯವಾಗಿ ತಮ್ಮ ಮಾಧ್ಯಮ ಸಂಸ್ಥೆಯಲ್ಲಿ ಒಬ್ಬ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ ಯುವಕರಿಗೆ ಉದ್ಯೋಗ ನೀಡತಕ್ಕದ್ದು. ಮಾಧ್ಯಮ ಘಟಕ ಸ್ಥಾಪಿಸಿದ ಕುರಿತು ಸ್ಥಳ ಪರಿಶೀಲನೆ ಮಾಡಿ ಜಿಪಿಎಸ್ ಫೋಟೋದೊಂದಿಗೆ ವರದಿಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಗುವುದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.