Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಷ್ಯಾ ಬಂಡಾಯ ಶಮನ: ದಂಗೆ ನಿಲ್ಲಿಸಿ, ಉಕ್ರೇನ್ ಶಿಬಿರಗಳಿಗೆ ಮರಳಿ ಎಂದ ವ್ಯಾಗ್ನರ್ ಮುಖ್ಯಸ್ಥ

ಮಾಸ್ಕೊ: ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ಮರಳುವಂತೆ ತಮ್ಮ ಪಡೆಗೆ ಆದೇಶಿಸಿದ್ದೇನೆ ಎಂದು ವ್ಯಾಗ್ನರ್ ನಾಯಕ ಪ್ರಿಗೋಷಿನ್ ತಿಳಿಸಿದ್ದಾರೆ. ‘ನಮ್ಮ ಯೋಧರು ಮಾಸ್ಕೊದಿಂದ ಕೇವಲ 200 ಕಿ.ಮೀ ದೂರದಲ್ಲಿರುವಾಗ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಪ್ರಿಗೋಷಿನ್ ತಿಳಿಸಿದ್ದಾರೆ. ಆದರೆ, ರಷ್ಯಾ ತಮ್ಮ ಬೇಡಿಕೆಗಳಿಗೆ ಸಮ್ಮತಿಸಿದೆಯೇ ಎಂಬ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ರಷ್ಯಾ ಸಹ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೇ ತಿರುಗಿಬಿದ್ದಿರುವ ರಷ್ಯಾದ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಪ್ರಿಗೊಜಿನ್, ಪುಟಿನ್ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಪ್ರಿಗೊಜಿನ್ ಅವರು ಮಾಸ್ಕೋದಿಂದ ಕೇವಲ 200 ಕಿಲೋಮೀಟರ್(120 ಮೈಲುಗಳು) ದೂರದಲ್ಲಿರುವಾಗ, “ರಷ್ಯಾದಲ್ಲಿ ರಕ್ತಪಾತ” ತಪ್ಪಿಸಲು ತನ್ನ ಖಾಸಗಿ ಸೇನೆ ವಾಪಸ್ ಪಡೆಯಲು ನಿರ್ಧರಿಸಿದರು. ಇದಕ್ಕೂ ಮುನ್ನ ದಕ್ಷಿಣ ರಷ್ಯಾದ ಸೇನಾ ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದ ವಾಗ್ನರ್, ತಮಗೆ ಸ್ಥಳೀಯರ ಬೆಂಬಲವೂ ಇದೆ ಎಂದು ತಿಳಿಸಿತ್ತು.