Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಷ್ಯಾ ಹಡಗು ಮುಳುಗಿಸಲು ಸ್ಪೇಸ್​ ಎಕ್ಸ್​​ನ ನೆರವು ಕೇಳಿತ್ತಾ ಉಕ್ರೇನ್? ಮಸ್ಕ್​ ಹೇಳಿದ್ದು ಹೀಗೆ…!

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ರಷ್ಯಾದ ಹಡಗುಗಳ ಮೇಲೆ ದಾಳಿ ಮಾಡಲು ಅನುಕೂಲವಾಗುವಂತೆ ಕಪ್ಪು ಸಮುದ್ರದ ಪ್ರಮುಖ ಬಂದರು ಕ್ರಿಮಿಯಾದ ಸೆವಾಸ್ಟೋಪೋಲ್‌ವರೆಗೆ ಬಾಹ್ಯಾಕಾಶ ಇಂಟರ್ನೆಟ್ ಸೇವೆ ಸ್ಪೇಸ್ ಎಕ್ಸ್ ಅನ್ನು ಆನ್ ಮಾಡುವಂತೆ ಸರಕಾರಿ ಅಧಿಕಾರಿಗಳು ಮಾಡಿದ ತುರ್ತು ಮನವಿಗೆ ತಾನು ಮಣಿಯಲಿಲ್ಲ ಎಂದು ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಶುಕ್ರವಾರ ಬಹಿರಂಗಪಡಿಸಿದ್ದಾರೆ.

“ಸೆವಾಸ್ಟೋಪೋಲ್​ವರೆಗೆ ಸ್ಟಾರ್​ಲಿಂಕ್​ ಅನ್ನು ಸಕ್ರಿಯಗೊಳಿಸುವಂತೆ ಸರ್ಕಾರಿ ಅಧಿಕಾರಿಗಳಿಂದ ತುರ್ತು ವಿನಂತಿ ಬಂದಿತ್ತು” ಎಂದು ಮಸ್ಕ್ ಉಕ್ರೇನ್ ಸರ್ಕಾರವನ್ನು ಉಲ್ಲೇಖಿಸದೆ ಹೇಳಿದ್ದಾರೆ. “ಬಂದರಿನಲ್ಲಿ ಲಂಗರು ಹಾಕಿದ್ದ ರಷ್ಯಾ ನೌಕಾಪಡೆಯ ಬಹುತೇಕ ಹಡಗುಗಳನ್ನು ಮುಳುಗಿಸುವುದು ಈ ವಿನಂತಿಯ ಸ್ಪಷ್ಟ ಉದ್ದೇಶವಾಗಿತ್ತು. ನಾನು ಅವರ ಮನವಿಗೆ ಒಪ್ಪಿದ್ದರೆ, ಸ್ಪೇಸ್‌ಎಕ್ಸ್ ಯುದ್ಧ ಮತ್ತು ಸಂಘರ್ಷ ಉಲ್ಬಣಗೊಳ್ಳುವ ಪ್ರಮುಖ ಕೃತ್ಯವೊಂದರಲ್ಲಿ ಭಾಗಿಯಾದಂತಾಗುತ್ತಿತ್ತು.” ಎಂದು ಮಸ್ಕ್ ಹೇಳಿದ್ದಾರೆ.

“ಪ್ರಸ್ತಾವಿತ ಯಾವುದೇ ಪ್ರದೇಶಗಳಲ್ಲಿ ಸ್ಟಾರ್​ಲಿಂಕ್ ಅನ್ನು ಸಕ್ರಿಯಗೊಳಿಸಲಿಲ್ಲ. ಹಾಗೆಯೇ ಸ್ಪೇಸ್‌ಎಕ್ಸ್ ಯಾವುದನ್ನೂ ನಿಷ್ಕ್ರಿಯಗೊಳಿಸಲಿಲ್ಲ” ಎಂದು ಮಸ್ಕ್ ಹೇಳಿದರು. “ಎರಡೂ ಕಡೆಯವರು ಕದನ ವಿರಾಮಕ್ಕೆ ಒಪ್ಪಬೇಕು. ದಿನ ಕಳೆದಂತೆ ತುಂಡು ಭೂಮಿಗಾಗಿ ಅನೇಕ ಉಕ್ರೇನಿಯನ್ ಮತ್ತು ರಷ್ಯಾದ ಯುವಕರು ಸಾಯುತ್ತಿದ್ದಾರೆ. ಆದರೆ ಇದರಿಂದ ಯಾವುದೇ ಗಡಿಗಳು ಬದಲಾಗುವುದಿಲ್ಲ. ಈ ಹೋರಾಟ ಆ ಜೀವಹಾನಿಗೆ ತಕ್ಕುದಲ್ಲ” ಎಂದು ಬಿಲಿಯನೇರ್ ಮಸ್ಕ್ ಪೋಸ್ಟ್ ಮಾಡಿದ್ದಾರೆ.

ಕಳೆದ ವರ್ಷ ಯುದ್ಧ ಆರಂಭವಾದಾಗ ಸ್ಟಾರ್​ಲಿಂಕ್ ಇಂಟರ್​ನೆಟ್​ ವ್ಯವಸ್ಥೆಯ ಬಗ್ಗೆ ಪ್ರಸ್ತಾಪವಾಗಿತ್ತು. ಉಕ್ರೇನ್​ನಲ್ಲಿ ಕೆಲಸ ಮಾಡುತ್ತಿರುವ ಏಕೈಕ ಇಂಟರ್​ನೆಟ್​ ವ್ಯವಸ್ಥೆ ಸ್ಟಾರ್​ಲಿಂಕ್. ಅದನ್ನೂ ಹಾಳು ಮಾಡಲು ರಷ್ಯಾ ಬಯಸುತ್ತಿದೆ ಎಂದು ಆಗ ಮಸ್ಕ್ ಹೇಳಿದ್ದರು.

ಸ್ಟಾರ್ ಲಿಂಕ್ ಎಂಬುದು ದೂರದ ಸ್ಥಳಗಳಿಗೆ ಕಡಿಮೆ ವೆಚ್ಚದ ಇಂಟರ್​ನೆಟ್​ ಒದಗಿಸಲು ಖಾಸಗಿ ಬಾಹ್ಯಾಕಾಶ ಕಂಪನಿ ಸ್ಪೇಸ್ ಎಕ್ಸ್ ಅಭಿವೃದ್ಧಿಪಡಿಸಿದ ಉಪಗ್ರಹ ಜಾಲವಾಗಿದೆ. ಸ್ಟಾರ್​ ಲಿಂಕ್ ಉಪಗ್ರಹವು ಸರಿಸುಮಾರು ಐದು ವರ್ಷಗಳ ಜೀವಿತಾವಧಿಯನ್ನು ಹೊಂದಿದೆ ಮತ್ತು ಸ್ಪೇಸ್‌ಎಕ್ಸ್ ಈ ಮೆಗಾ ಕಾನ್ಸ್​ಟೆಲೇಶನ್ ಎಂದು ಕರೆಯಲ್ಪಡುವ 42,000 ಉಪಗ್ರಹಗಳನ್ನು ಹೊಂದುವ ಗುರಿಯನ್ನು ಹೊಂದಿದೆ. ಜುಲೈ 2023 ರ ಹೊತ್ತಿಗೆ ಕಕ್ಷೆಯಲ್ಲಿ 4,519 ಸ್ಟಾರ್​ ಲಿಂಕ್ ಉಪಗ್ರಹಗಳಿದ್ದು, ಇವುಗಳಲ್ಲಿ 4,487 ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ.

ಸ್ಟಾರ್​​ ಲಿಂಕ್ ಉಪಗ್ರಹಗಳು ಭೂಮಿಯಿಂದ ಸುಮಾರು 342 ಮೈಲಿ (550 ಕಿಲೋಮೀಟರ್) ಎತ್ತರದಲ್ಲಿ ಸುತ್ತುತ್ತವೆ ಮತ್ತು ಆಕಾಶದಲ್ಲಿ ಚಲಿಸುವಾಗ ವೀಕ್ಷಕರಿಗೆ ಅದ್ಭುತವಾಗಿ ಗೋಚರಿಸುತ್ತವೆ. ಸ್ಟಾರ್​ ಲಿಂಕ್ ದಶಕಗಳಿಂದ ಅಸ್ತಿತ್ವದಲ್ಲಿರುವ ಉಪಗ್ರಹ ಇಂಟರ್​ನೆಟ್​ ಸೇವಾ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಇಂಟರ್​ನೆಟ್​ ಡೇಟಾ ರವಾನಿಸಲು ಫೈಬರ್ ಆಪ್ಟಿಕ್ಸ್ ನಂಥ ಕೇಬಲ್ ತಂತ್ರಜ್ಞಾನವನ್ನು ಬಳಸುವ ಬದಲು, ಸ್ಟಾರ್​ ಲಿಂಕ್ ಉಪಗ್ರಹ ವ್ಯವಸ್ಥೆಯು ಬಾಹ್ಯಾಕಾಶದ ನಿರ್ವಾತದ ಮೂಲಕ ರೇಡಿಯೋ ಸಂಕೇತಗಳನ್ನು ಕಳುಹಿಸುವ ಮೂಲಕ ಇಂಟರ್​ ನೆಟ್​ ಜಾಲವನ್ನು ನಿರ್ಮಿಸುತ್ತದೆ.