Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿಯಾಗಿ ನಿಲ್ಲಬೇಕು- ಸಿಎಂ

ನವದೆಹಲಿ: ಕನ್ನಡ ನಾಡು, ನುಡಿ, ಜಲ, ಭೂಮಿ, ಭಾಷೆ, ಸಂಸ್ಕೃತಿ ಕಾಪಾಡುವ ವಿಚಾರದಲ್ಲಿ ಪಕ್ಷ ರಾಜಕಾರಣ ಪಕ್ಕಕ್ಕಿಟ್ಟು ನಾವೆಲ್ಲಾ ಒಂದು ಧ್ವನಿಯಾಗಿ ಗಟ್ಟಿಯಾಗಿ ನಿಲ್ಲಬೇಕು.ನೀರು ಬಿಡಬಾರದು ಎನ್ನುವ ಪ್ರಶ್ನೆ ಅಲ್ಲ. ಬಿಡಲು ನಮ್ಮಲ್ಲಿ ನೀರೇ ಇಲ್ಲ.ಸಂಕಷ್ಟ ಸೂತ್ರ ಸಿದ್ದವಾಗದೇ ಇರುವುದರಿಂದ ಸಂದರ್ಭ ಕ್ಲಿಷ್ಟಕರವಾಗಿ ಪರಿಣಮಿಸಿದೆಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರದ ಸಚಿವರು, ಸರ್ವ ಪಕ್ಷ ಸಂಸತ್ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ನಮಗೆ ಈಗ ಕುಡಿಯುವ ನೀರಿಗೆ 33 ಟಿಎಂಸಿ, ಬೆಳೆ ರಕ್ಷಣೆಗೆ 70 ಟಿಎಂಸಿ, ಕೈಗಾರಿಕೆಗಳಿಗೆ 3 ಟಿಎಂಸಿ ಸೇರಿ ಒಟ್ಟು 106 ಟಿಎಂಸಿ ನೀರು ನಮಗೆ ಅನಿವಾರ್ಯ. ಈಗ ನಮ್ಮ ಬಳಿ ಇರುವುದು 53 ಟಿಎಂಸಿ ನೀರು ಮಾತ್ರ. ಹೀಗಾಗಿ ತಮಿಳುನಾಡಿಗೆ ಬಿಡಲು ನೀರೇ ಇಲ್ಲ.

ನಮಗೆ ಆಗಸ್ಟ್ ಬಳಿಕ ಮಳೆ ಬರಲ್ಲ. ತಮಿಳುನಾಡಿಗೆ ಆಗಸ್ಟ್ ಬಳಿಕದ ಮಳೆ ಬರುತ್ತದೆ. ಅಲ್ಲಿ ಅಂತರ್ಜಲ ಕೂಡ ಹೆಚ್ಚಿದೆ. ಆದ್ದರಿಂದ ನಾವು ಹೆಚ್ಚು ಸಂಕಷ್ಟದಲ್ಲಿದ್ದೇವೆ.

ಈ ಪರಿಸ್ಥಿತಿಯನ್ನು ನಮ್ಮ ಕಾನೂನು ತಂಡ ಮತ್ತು ತಜ್ಞ ಹಾಗೂ ಅಧಿಕಾರಿಗಳ ತಂಡ CWMC ಎದುರು ಸಮರ್ಥವಾಗಿ ವಾದ ಮಂಡಿಸಿದ್ದಾರೆ.ಸುಪ್ರೀಂಕೋರ್ಟ್ ಆದೇಶದ ಪ್ರಕಾರ 108.4 ಟಿಎಂಸಿ ನೀರನ್ನು ನಾವು ಬಿಡಬೇಕಿತ್ತು. ಆದರೆ ನಾವು ಬಿಟ್ಟಿರುವುದು 39.8 ಟಿಎಂಸಿ ನೀರು ಮಾತ್ರ. ಏಕೆಂದರೆ ನಮ್ಮಲ್ಲಿ ನೀರೇ ಇಲ್ಲ. ಆದ್ದರಿಂದ ನಮಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.

ಇಂಥಾ ಪರಿಸ್ಥಿತಿ ಎದುರಾದಾಗ ಸಮರ್ಥವಾಗಿ ಜನರ ಹಿತ ಕಾಪಾಡಲು ಮೇಕೆದಾಟು ನಮಗೆ ಅನಿವಾರ್ಯ. ಆದ್ದರಿಂದ ನಮ್ಮ ನೀರನ್ನು, ನಮ್ಮ ಜಾಗದಲ್ಲಿ ಬಳಸಿಕೊಳ್ಳಲು, ಸಂಗ್ರಹಿಸಿಕೊಳ್ಳಲು, ವಿದ್ಯುತ್ ಉತ್ಪಾದಿಸಿಕೊಳ್ಳಲು ಮೇಕೆದಾಟು ನಮಗೆ ಅಗತ್ಯವಿದೆ.ಮುಂದಿನ ದಿನಗಳಲ್ಲಿ ಇಂಥಾ ಪರಿಸ್ಥಿತಿಗೆ ಮೇಕೆದಾಟು ಪರಿಹಾರ ಆಗುತ್ತದೆ ಎಂದರು.

ಈಗಾಗಲೇ ನಾವು ಕೇಂದ್ರ ನೀರಾವರಿ ಸಚಿವರಿಗೆ ಎರಡು ಬಾರಿ ಪತ್ರ ಬರೆದು ಪರಿಸ್ಥಿತಿಯನ್ನು ಸಮಗ್ರವಾಗಿ ವಿವರಿಸಿದ್ದೇವೆ. ಸರ್ವ ಪಕ್ಷ ನಿಯೋಗದೊಂದಿಗೆ ಭೇಟಿ ಮಾಡಲು ಕೇಂದ್ರದ ಜಲ ಶಕ್ತಿ ಸಚಿವರು ಹಾಗೂ ಪ್ರಧಾನಿ ಅವರ ಸಮಯ ಕೇಳಿದ್ದೇವೆ.ಹೀಗಾಗಿ ಮುಂದೆ ನಾವು ಇಡಬೇಕಾದ ಹೆಜ್ಜೆಗಳ ಕುರಿತು ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿ ಚರ್ಚಿಸಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಖಾತೆ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ ರಾಜ್ಯಕ್ಕೆ ಎದುರಾಗಿರುವ ಸಂದರ್ಭವನ್ನು ಆರಂಭದಲ್ಲಿ ಸಭೆಗೆ ವಿವರಿಸಿದರು.ರಾಜ್ಯದ ಹಿತಾಸಕ್ತಿ ಬಂದಾಗ ರಾಜಕಾರಣ ಮುಂದಕ್ಕೆ ಬರಬಾರದು. ಎಲ್ಲ ಸಂಸದರು, ರಾಜ್ಯ ಸಭಾ ಸದಸ್ಯರು ಒಟ್ಟಾಗಿ ನಿಂತು ರಾಜ್ಯದ ಪರವಾಗಿ ದೆಹಲಿಯಲ್ಲಿ, ಕೇಂದ್ರ ಸಚಿವರ ಎದುರು ಬೇಡಿಕೆ ಮಂಡಿಸಬೇಕು.

ನಮ್ಮ ಅಧಿಕಾರಿಗಳು, ತಜ್ಞರು ಮತ್ತು ಕಾನೂನು ತಂಡ ಸಮರ್ಥವಾಗಿ ವಾಸ್ತವ ಪರಿಸ್ಥಿತಿಯನ್ನು CWMA ನಲ್ಲೂ ಪ್ರಸ್ತುತ ಪಡಿಸಿದ್ದಾರೆ.ನಮಗೆ ಕೇಂದ್ರದಿಂದಲೂ ಸಕಾರಾತ್ಮಕ ನೆರವು ದೊರಕುವ ನಿಟ್ಟಿನಲ್ಲಿ ಬೇಡಿಕೆ, ಒತ್ತಡಗಳನ್ನು ಮಂಡಿಸಬೇಕು.ನಮಗೆ ಸಮಸ್ಯೆ ಬಗೆಹರಿದು ರಾಜ್ಯದ ಹಿತಾಸಕ್ತಿ ಕಾಪಾಡಿಕೊಳ್ಳುವುದಷ್ಟೆ ಮುಖ್ಯ. ಇದಕ್ಕಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ವಿನಂತಿಸಿದರು.