ರಾಜ್ಯಸಭಾ ಚುನಾವಣೆ: 36 ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ.!
ನವದೆಹಲಿ: ರಾಜ್ಯಸಭೆಯ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಶೇ 36ರಷ್ಟು ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಅಲ್ಲದೆ, ಈ ಅಭ್ಯರ್ಥಿಗಳ ಸರಾಸರಿ ಆಸ್ತಿ ₹127.81 ಕೋಟಿ ಆಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.
15 ರಾಜ್ಯಗಳಲ್ಲಿನ 56 ಸ್ಥಾನಗಳಿಗೆ ಒಟ್ಟು 59 ಅಭ್ಯರ್ಥಿಗಳು ಕಣದಲ್ಲಿದ್ದು, ಈ ಪೈಕಿ 58 ಅಭ್ಯರ್ಥಿಗಳ ಅಫಿಡವಿಟ್ಗಳನ್ನು ವಿಶ್ಲೇಷಿಸಿ ಎಡಿಆರ್ ವರದಿ ಸಿದ್ಧಪಡಿಸಿದೆ. ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿ ಜಿ.ಸಿ.ಚಂದ್ರಶೇಖರ್ ಅವರು ಸಲ್ಲಿಸಿರುವ ದಾಖಲೆಗಳು ಸ್ಪಷ್ಟವಾಗಿ ಗೋಚರಿಸದ (ಸರಿಯಾಗಿ ‘ಸ್ಕ್ಯಾನ್’ ಆಗಿಲ್ಲ) ಕಾರಣ ಅವರನ್ನು ವಿಶ್ಲೇಷಣೆಯಿಂದ ಕೈಬಿಡಲಾಗಿದೆ ಎಂದು ಎಡಿಆರ್ ಹೇಳಿದೆ. ರಾಜ್ಯಸಭಾ ಚುನಾವಣೆ ಇದೇ 27ರಂದು ನಡೆಯಲಿದೆ.
ಶೇ 36ರಷ್ಟು ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿಕೊಂಡಿದ್ದಾರೆ. ಈ ಪೈಕಿ ಶೇ 17ರಷ್ಟು ಅಭ್ಯರ್ಥಿಗಳು ಗಂಭೀರ ಸ್ವರೂಪದ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದರೆ, ಒಬ್ಬರು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ಬಿಜೆಪಿಯ ಒಟ್ಟು 30 ಅಭ್ಯರ್ಥಿಗಳ ಪೈಕಿ 8 (ಶೇ 27), ಕಾಂಗ್ರೆಸ್ 9 ಅಭ್ಯರ್ಥಿಗಳ ಪೈಕಿ 6 (ಶೇ 67), ಟಿಎಂಸಿಯ ನಾಲ್ಕು ಅಭ್ಯರ್ಥಿಗಳ ಪೈಕಿ ಒಬ್ಬರು (ಶೇ 25), ಎಸ್ಪಿಯ ಮೂವರಲ್ಲಿ ಇಬ್ಬರು (ಶೇ 67), ವೈಎಸ್ಆರ್ಪಿಸಿಯ ಮೂವರಲ್ಲಿ ಒಬ್ಬರು (ಶೇ 33), ಆರ್ಜೆಡಿಯ ಇಬ್ಬರು ಅಭ್ಯರ್ಥಿಗಳಲ್ಲಿ ಒಬ್ಬರು (ಶೇ 50), ಬಿಜೆಡಿಯ ಇಬ್ಬರ ಪೈಕಿ ಒಬ್ಬರು (ಶೇ 50) ಮತ್ತು ಬಿಆರ್ಎಸ್ನ ಒಬ್ಬರ (ಶೇ 100) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.