ರಾಮಲಲ್ಲಾನ ಮೂರ್ತಿ ಶಿಲೆಗೆ ದಂಡ ವಿಧಿಸಿದ ಕುರಿತು ಗುತ್ತಿಗೆದಾರ ಶ್ರೀನಿವಾಸ್ ಸ್ಪಷ್ಟನೆ
ಮೈಸೂರು: ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯಾಗಿದ್ದು, ಈ ಮೂರ್ತಿ ಮೂಡಿ ಬಂದಿರುವ ಕೃಷ್ಣ ಶಿಲೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಿಸಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಇದೀಗ ಈ ವದಂತಿಗಳಿಗೆ ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರು ಸ್ಪಷ್ಟನೆ ನೀಡಿದ್ದಾರೆ.
ರಾಮಲಲ್ಲಾನ ಮೂರ್ತಿ ಕೆತ್ತನೆಗೆ ಕಲ್ಲು ಆಯ್ಕೆ ಆಗಿರುವುದು 6 ತಿಂಗಳ ಹಿಂದೆ. ಆದರೆ ನಾನು ದಂಡ ಕಟ್ಟಿರುವುದು 2022ರ ಜುಲೈನಲ್ಲಿ. ಗಣಿ ಇಲಾಖೆಯಿಂದ ಅನುಮತಿ ಪಡೆಯದೆ ಗಣಿಗಾರಿಕೆ ಮಾಡಿದ ಕಾರಣ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಿಸಿದ್ದರು. ಅದರಂತೆ ನಾನು ದಂಡ ಪಾವತಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಇನ್ನು ರಾಮಲಲ್ಲಾನ ಮೂರ್ತಿ ತಯಾರಿಸಲು ಕೃಷ್ಣ ಕಲ್ಲು ಆಯ್ಕೆ ಆಗಿರುವುದು 6 ತಿಂಗಳ ಹಿಂದೆ. ಈ ಕಲ್ಲಿಗೆ ಸಂಬಂಧಿಸಿದಂತೆ ದಂಡ ವಿಧಿಸಿಲ್ಲ. ಆದ್ದರಿಂದ ಸುಳ್ಳು ಸುದ್ದಿ ಹರಡಬೇಡಿ ಎಂದು ಗುತ್ತಿಗೆದಾರ ಶ್ರೀನಿವಾಸ್ ಅವರು ಮನವಿ ಮಾಡಿಕೊಂಡಿದ್ದಾರೆ.