ರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನೇರ ಪ್ರಸಾರ ಪ್ರಾರಂಭ
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ರಾಮ ಮಂದಿರದಲ್ಲಿ ಈಗಾಗಲೇ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿದ್ದು, ಬೆಳಗ್ಗೆ 11 ಗಂಟೆಯಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರ ಪ್ರಾರಂಭವಾಗಿದೆ.
ದೇಶದ ಬಹುತೇಕ ನಗರಗಳು ಮತ್ತು ಹಳ್ಳಿಗಳ ದೇವಾಲಯಗಳಲ್ಲಿ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲೂ ಬೃಹತ್ ಎಲ್ ಇಡಿ ಪರದೆಗಳನ್ನು ಅಳವಡಿಸಲಾಗಿದೆ. ಈ ಮೂಲಕ ದೇಶದ ಎಲ್ಲಾ ಜನರಿಗೂ ರಾಮಲಲ್ಲಾನ ಪ್ರತಿಷ್ಠಾಪನೆಯನ್ನು ನೋಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ದೂರದರ್ಶನದ ಎಲ್ಲಾ ವಾಹಿನಿಗಳಲ್ಲೂ ಕಾರ್ಯಕ್ರಮ ನೇರವಾಗಿ ಭಿತ್ತರಗೊಳ್ಳಲಿದ್ದು, ಇನ್ನು ನೇರಪ್ರಸಾರಕ್ಕಾಗಿ ರಾಮ ಮಂದಿರದ ಪ್ರಾಂಗಣ, ಸರಯೂ ನದಿ ತಟ, ಜಟಾಯು ಪ್ರತಿಮೆ ಸೇರಿದಂತೆ ಅಯೋಧ್ಯೆಯ ವಿವಿಧೆಡೆ 40 ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ದೂರದರ್ಶನ ನಿಯೋಜಿಸಿದೆ.
ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತವು 84 ಸೆಕೆಂಡ್ ಗಳಷ್ಟು ಮಾತ್ರ ಇದ್ದು, ಅದು 12 ಗಂಟೆ 29 ನಿಮಿಷ 8 ಸೆಕೆಂಡುಗಳಿಂದ 12 ಗಂಟೆ 30 ನಿಮಿಷ 32 ಸೆಕೆಂಡುಗಳವರೆಗೆ ಇರಲಿದೆ. ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ ಸಂಬಂಧಿಸಿದ ಕಾರ್ಯಕ್ರಮಗಳು 12.20 ರಿಂದ 12.45ರವರೆಗೆ ನಡೆಯಲಿವೆ.
ಇನ್ನು ವಿಷ್ಣುವಿನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಪುರೋಹಿತರು ಮಂತ್ರಗಳ ಮೂಲಕ ಪ್ರಭು ಶ್ರೀರಾಮನನ್ನು ಆವಾಹನೆ ಮಾಡುತ್ತಾರೆ. 121 ಜನ ವೈದಿಕ ವಿದ್ವಾಂಸರು, ಆಚಾರ್ಯ ಗಣೇಶ್ವರ ದ್ರಾವಿಡ್ ಮತ್ತು ಆಚಾರ್ಯ ಲಕ್ಷ್ಮೀಕಾಂತ ದ್ವಿವೇದಿ ಅವರ ಮಾರ್ಗದರ್ಶನದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ಬಳಿಕ ಇಂದು ಸಂಜೆ ದೀಪೋತ್ಸವ ನಡೆಯಲಿದ್ದು, ಈ ದೀಪೋತ್ಸವದಲ್ಲಿ ಒಟ್ಟು ಹತ್ತು ಲಕ್ಷ ಹಣತೆಗಳನ್ನು ಬೆಳಗಿಸಲಾಗುತ್ತದೆ.